ದಾವಣಗೆರೆ: ಡಾ.ಬಿ.ಶಾಮಸುಂದರ ಶೆಟ್ಟಿ ಬಂಟರ ಭವನ ಉದ್ಘಾಟನೆ
ದಾವಣಗೆರೆ, ಎ.27: ಬಂಟ ಸಮಾಜದವರು ವಿಶ್ವದಲ್ಲಿ ಎಲ್ಲೇ ಇದ್ದರೂ ಎಲ್ಲಾ ಜನರ ನಡುವೆ ಉತ್ತಮ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡು ಯಶಸ್ವಿ ನಾಯಕರಾಗಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ವತಿಯಿಂದ ನಗರದ ಸಪ್ತಗಿರಿ ಸ್ಕೂಲ್ ಹಾಸ್ಟೆಲ್ ಎದುರು ಕುಂದುವಾಡ ರಸ್ತೆ ನೂತನ ಹವಾನಿಯಂತ್ರಿತ ಡಾ.ಬಿ.ಶಾಮಸುಂದರ ಶೆಟ್ಟಿ ಬಂಟರ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಕೆಲಸಗಳಿಗೆ ದಾನ ಮಾಡುವುದರಿಂದ ಸದಾ ಪುಣ್ಯ ಪ್ರಾಪ್ತಿಯಾಗುವ ಜೊತೆಗೆ ಅವರ ಹೆಸರು ಸದಾ ಸಮಾಜದಲ್ಲಿ ಹೆಸರಾಗಿ ಉಳಿಯುತ್ತದೆ. ಅಂತಹ ಕೆಲಸವನ್ನು ಬಂಟರ ಸಮಾಜ ಮಾಡುತ್ತಿದ್ದು, ಈ ಸಮುದಾಯ ಭವನದಲ್ಲಿ ನಡೆಯುವ ಎಲ್ಲಾ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಆಶಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆಯಲ್ಲಿ ಭವನ ಕಟ್ಟುವ ಆಸೆ ಬಂಟರ ಸಮುದಾಯದವರ ಕನಸಾಗಿತ್ತು. ಅದು ಈಗ ದಾನಿಗಳಿಂದ ನೆರವೇರಿದೆ. ದಾವಣಗೆರೆಯಲ್ಲಿ 800ಕ್ಕೂ ಹೆಚ್ಚು ಈ ಸಮುದಾಯದ ಮನೆಗಳಿದ್ದು, ಯಾವುದೇ ಕಾರ್ಯಕ್ರಮವನ್ನಾದರೂ ಒಗ್ಗಟ್ಟು ಮತ್ತು ಶಿಸ್ತಿನ ಮೂಲಕ ಉತ್ತಮವಾಗಿ ನಡೆಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಪಾಲಿಕೆ ಮೇಯರ್ ಅನಿತಾಬಾಯಿ, ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ, ಸುರೇಂದ್ರ ಶೆಟ್ಟಿ, ಡಾ.ಎಂ. ಪ್ರಭಾರಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಶಕುಂತಲಾ ಶೆಟ್ಟಿ, ಜಯಪ್ರಕಾಶ್ ಹೆಗಡೆ, ಡಾ.ಶಾರದ ಎಸ್.ಶೆಟ್ಟಿ, ಎಸ್.ಕರುಣಾರಕ ಶೆಟ್ಟಿ ಮತ್ತಿತರರು ಇದ್ದರು.