×
Ad

ಶಿವಮೊಗ್ಗದಲ್ಲಿ ಒ.ಸಿ. ಬಿಡ್ಡರ್‌ಗಳ ಬಂಧನ: ಲಕ್ಷಾಂತರ ರೂ. ವಶ

Update: 2017-04-27 17:30 IST

ಶಿವಮೊಗ್ಗ, ಎ.27: ನಗರದ ವಿವಿಧೆಡೆ ಒ.ಸಿ. ಜೂಜಿನ ದಂಧೆ ನಡೆಸುತ್ತಿದ್ದ ಬಿಡ್ಡರ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡಗಳು, ಏಳು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಹೊಸಮನೆ ಬಡಾವಣೆಯ ಗೋಪಿ (37), ಗಾಂಧಿಬಜಾರ್‌ನ ಅಭಿಷೇಕ್ (23), ರಾಗಿಗುಡ್ಡದ ನಿವಾಸಿಗಳಾದ ತೌಫಿಕ್ ಅಹಮದ್ ಯಾನೆ ಸದ್ದಾಂ (26), ಫಾರೂಕ್ ಯಾನೆ ಜೆ.ಬಿ.ಆರ್. (40), ಗಾಂಧಿಬಜಾರ್ ನಿವಾಸಿ ಸೀನ ಯಾನೆ ಕೊಳಕು ಸೀನ (68), ಟಿಪ್ಪುನಗರದ ತನ್ವೀರ್ ಅಹಮದ್ (39), ವಿನೋಬನಗರದ ರಮೇಶ್ (32) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಪೊಲೀಸರು ದಾಳಿ ನಡೆಸಿದ ವೇಳೆ ಗೋಪಾಳದ ಒ.ಸಿ. ಬಿಡ್ಡರ್ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳಿಂದ 1,46,200 ರೂ. ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟಾರೆ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ಪಂಪಾತಿ ನೇತೃತ್ವದಲ್ಲಿ ಡಿಸಿಬಿ ಇನ್ಸ್‌ಪೆಕ್ಟರ್ ಕೆ. ಕುಮಾರ್, ಡಿಎಸ್‌ಬಿ ಇನ್ಸ್‌ಪೆಕ್ಟರ್ ಮುತ್ತಣ್ಣಗೌಡ, ಡಿಸಿಐಬಿ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ: ಇತ್ತೀಚೆಗೆ ನಗರದಲ್ಲಿ ಕ್ರಿಕೆಟ್ ಜೂಜು, ಮಟ್ಕಾ, ಒ.ಸಿ. ಹಾವಳಿ ವಿಪರೀತ ಮಟ್ಟಕ್ಕೆ ತಲುಪಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಡಿಸಿಆರ್‌ಬಿ, ಡಿಎಸ್‌ಬಿ, ಡಿಸಿಐಬಿ, ಡಿಸಿಬಿ ಪೊಲೀಸ್ ತಂಡಗಳು ಕಳೆದೊಂದು ವಾರದಿಂದ ನಗರದ ವಿವಿಧೆಡೆ ಜೂಜು ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸುತ್ತಿವೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಹಲವರನ್ನು ಈ ತಂಡ ಬಂಧಿಸಿತ್ತು. ಇದೀಗ ಒ.ಸಿ. ಬಿಡ್ಡರ್‌ಗಳ ಹೆಡೆಮುರಿ ಕಟ್ಟುವ ಕೆಲಸ ನಡೆಸಿದೆ. ವಿಶೇಷ ಪೊಲೀಸ್ ತಂಡಗಳ ಈ ಕಾರ್ಯಾಚರಣೆಗೆ ನಾಗರಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News