×
Ad

​ಕಾಳು ಮೆಣಸು ಕಳ್ಳತನ: ಐದು ಮಂದಿ ಆರೋಪಿಗಳ ಬಂಧನ

Update: 2017-04-27 18:01 IST

ಚಿಕ್ಕಮಗಳೂರು, ಎ.27: ಚಿಕ್ಕಮಗಳೂರು ಮತ್ತು ಆಲ್ದೂರು ಭಾಗಗಳಲ್ಲಿ ಕಾಳು ಮೆಣಸು ಕಳವು ನಡೆಸುತ್ತಿದ್ದ ಐದು ಮಂದಿ ಆರೋಪಿಗಳನ್ನು ಗ್ರಾಮಾಂತರ ವೃತ್ತದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಅತ್ತಿಗುಂಡಿ ಮಹಲ್ ಗ್ರಾಮದ ಅನಿಲ್(26), ಉಮೇಶ್ (30), ಅಣ್ಣಪ್ಪ (26), ತರೀಕೆರೆ ಗ್ರಾಮದ ದೊಡ್ಡಲಿಂಗದಹಳ್ಳಿ ಗ್ರಾಮದ ನವೀನ್ ನಾಯಕ್(27), ರಾಮನಹಳ್ಳಿ ಬಡಾವಣೆಯ ಸಿದ್ದಲಿಂಗಸ್ವಾಮಿ(32) ಗುರುತಿಸಲಾಗಿದೆ.

ಆರೋಪಿಗಳಿಂದ ಒಟ್ಟು 17 ಕ್ವಿಂಟಾಲ್ 90 ಕೆ.ಜಿ. ಕಾಳುಮೆಣಸು, ಕೃತ್ಯಕ್ಕೆ ಬಳಸಿದ್ದ ಒಂದು ಟಾಟಾಸುಮೋ ವಾಹನ ಮತ್ತು ಒಂದು ಮಹೀಂದ್ರ ಜೀಪ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಬೆಲೆ ಸುಮಾರು ರೂ. 13,95,000 ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ. ನಂ. 152/17 ಮತ್ತು ಅದೇ ಠಾಣೆಯ ಮೊ. ನಂ. 159/17, ಆಲ್ದೂರು ಪೊಲೀಸ್ ಠಾಣಾ ಮೊ. ನಂ. 79/17, ಅದೇ ಠಾಣೆಯ ಮೊ. ನಂ. 85/17 ಮತ್ತು ಮೊ. ನಂ. 86/17, ಹಾಗೂ ಮೊ. ನಂ. 87/17 ರಂತೆ ಎಲ್ಲಾ ಠಾಣೆಯಲ್ಲೂ ಕಲಂ 379 ಐಪಿಸಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಕಾಳು ಮೆಣಸು ಕಳವು ಪ್ರಕರಣಗಳು ಹೆಚ್ಚಾದಂತೆ ಪತ್ತೆ ಹಚ್ಚಲು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಗವಿರಾಜ್ ಮತ್ತು ಪೊಲೀಸ್ ಸಿಬ್ಬಂದಿಯಾದ ನಂಜಪ್ಪ, ಸುರೇಶ್, ಶಶಿಧರ, ಪಿ.ಡಿ.ಕುಮಾರಪ್ಪ, ಆಲ್ದೂರು ಠಾಣೆಯ ನಾಗರಾಜ್ ರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಆರೋಪಿಗಳು ಕಾಫಿ ತೋಟಗಳಲ್ಲಿ ಕೂಲಿ ಹಾಗೂ ಡ್ರೈವರ್ ಕೆಲಸ ಮಾಡುತ್ತಿದ್ದರು. ತಾವು ಈ ಹಿಂದೆ ಕೆಲಸ ಮಾಡಿದ್ದ ಸ್ಥಳಗಳಲ್ಲಿ ತೋಟದ ಮಾಲಕರು ಕಾಳು ಮೆಣಸು ಬೀಜವನ್ನು ಸಂಗ್ರಹಿಸಿಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News