ಕಾಂಗ್ರೆಸ್‌ಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಬಿಜೆಪಿ
ಮೂಡಿಗೆರೆ, ಎ.27: ಡಾ ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರ ರಾಜಕೀಯ ಭವಿಷ್ಯವನ್ನು ಹತ್ತಿಕ್ಕಲು ಕಾರಣವಾದ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ವಕ್ತಾರ ನಯನ ತಳವಾರ ಹೇಳಿದ್ದಾರೆ.
70 ವರ್ಷಗಳಿಂದ ತುಳಿತಕ್ಕೊಳಗಾಗಿರುವ ಭಾರತದ ಬಹುಸಂಖ್ಯಾತ ದಲಿತ ವರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೋಷಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಅವರ ವ್ಯಕ್ತಿತ್ವ ಸಾಧನೆ, ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ದೇಶದಲ್ಲಿರುವ ಮೇಲು-ಕೀಳನ್ನು ತೊಡೆದು ಹಾಕುವ ದೃಷ್ಠಿಯಿಂದ ಎಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ದಲಿತರ ಮನೆಗಳಿಗೆ ತೆರಳಿ, ಅಭಿವೃದ್ಧಿ ಮಾನದಂಡಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದವರು ಬಡವರು, ದಲಿತರು, ಶೋಷಿತರು, ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕಿಗಾಗಿ ಮಾರ್ಪಡಿಸಿಕೊಂಡಿದ್ದಾರೆ. ಇವರು ಅಭಿವೃದ್ಧಿ ಹೊಂದಿದಲ್ಲಿ ಕಾಂಗ್ರೆಸ್‌ನ ನೈಜ ಬಣ್ಣದ ಅರಿವು ಉಂಟಾಗಿ ಶಾಶ್ವತವಾಗಿ ದೇಶದಿಂದ ಪಕ್ಷವನ್ನು ಕಿತ್ತೊಗೆಯಲಿದ್ದಾರೆಂಬ ಕಾರಣದಿಂದ ಹಲವು ದಶಕಗಳಿಂದ ಅಂಧಕಾರದಲ್ಲಿ ಇಡಲಾಗಿದೆ. ಇನ್ನು ಮುಂದೆ ಇಂತಹ ತಂತ್ರಗಳು ನಡೆಯಲು ಬಿಡಬಾರದೆಂಬ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.