ರೈತರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳು: ಟಿ.ಬಿ.ಜಯಚಂದ್ರ

Update: 2017-04-27 13:46 GMT

ತುಮಕೂರು, ಎ.27: ಬರದಿಂದ ತತ್ತರಿಸಿ ಕೃಷಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರಕಾರ ರೈತರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಮತ್ತು ಸರಕಾರದ ಸೇವೆಗಳನ್ನು ಒದಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಗುರುವಾರ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ "ಸೇವ್ ದಿ ಫಾರ್‌ಮರ್" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಿರಂತರ ಬರ ಪರಿಸ್ಥಿತಿಯಿಂದಾಗಿ ರೈತ ಬೆಳೆದ ಬೆಳೆ ಕೈಗೆ ಸಿಗದೆ ಕಂಗಾಲಾಗಿ ಒತ್ತಡಕ್ಕೆ ಸಿಲುಕಿ ಮಾಡಿದ ಸಾಲ ತೀರಿಸಲಾಗದೆ ವಿಧಿಯಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಇದನ್ನು ತಪ್ಪಿಸಲು ಅಮೇರಿಕಾದ ಪ್ರತಿಷ್ಟಿತ ಸಂಸ್ಥೆ ವಟ್ಟಿಕುಟಿ, ಸಿಂಡಿಕೇಟ್ ಬ್ಯಾಂಕ್, ಭಾರತ ಸರಕಾರದ ಭೂಹೀನ ಕಿಸಾನ್ ಯೋಜನೆಯನ್ವಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರೈತರಿಗೆ ರೂ.8.36 ಕೋಟಿ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ದೇಶದಲ್ಲೆ ಪ್ರಥಮ ಬಾರಿಗೆ ಯಾವ ಆಧಾರವಿಲ್ಲದೆ ಸಾಲ ಸೌಲಭ್ಯವನ್ನು ಒದಗಿಸಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶಾಲಿನಿ ರಜನೀಶ್ ಮಾತನಾಡಿ, ರೈತ ರಕ್ಷಣಾ ಅಭಿಯಾನ ಯೋಜನೆ ರೈತರನ್ನು ಆತ್ಮಹತ್ಯೆಗಳಿಂದ ಪಾರು ಮಾಡಲು ಅತ್ಯಂತ ಸೂಕ್ತವಾದ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಒಳಗಾದ ರೈತ ಕುಟುಂಬಗಳಿಗೆ ಇಂದಿರಾ ಸುರಕ್ಷಾ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಸಾಂಕೇತಿಕವಾಗಿ ಕಿಸಾನ್ ಕ್ರೆಡಿಟ್, ರೂಪೇ ಕಾರ್ಡಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು.

ಸಮಾರಂಭದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶಗೌಡ,ತುಮಕೂರು ನಗರ ಶಾಸಕ ಡಾ.ರಫೀಕ್‌ಅಹಮದ್, ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಶ್ರೀವಾತ್ಸವ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News