ಬದಲಿ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಎಚ್.ವಿಶ್ವನಾಥ್ ಘೋಷಣೆ
ಕೆ.ಆರ್.ನಗರ, ಎ.27: "ನಾಲ್ಕು ದಶಕಗಳಿಂದ ಕಾಂಗ್ರೆಸ್ ಕಟ್ಟಾಳಾಗಿ ಸೇವೆ ಸಲ್ಲಿಸಿರುವ ನನ್ನನ್ನು ಪಕ್ಷದಿಂದ ಹೊರಹಾಕಲು ಮುಖ್ಯಮಂತ್ರಿ ಕುತಂತ್ರ ನಡೆಸುತ್ತಿದ್ದು, ಪಕ್ಷದ ನಿರ್ಧಾರ ಹೊರಬೀಳುವ ಮೊದಲೇ ನಾನು ಬದಲಿ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ.
ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪಕ್ಷದಿಂದ ಉಚ್ಛಾಟಿತರಾಗಿ ರಾಜಕೀಯ ನೆಲೆ ಇಲ್ಲದೆ ದಿಕ್ಕಾಪಾಲಾಗಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆತಂದು ರಾಜಕೀಯ ಪುನರ್ ಜನ್ಮ ನೀಡಿದ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಅವರು ಮುಂದೆ ತಕ್ಕ ಬೆಲೆ ತೆರಬೇಕಾಗುತ್ತದೆ" ಎಂದರು.
"ಪಕ್ಷದಲ್ಲಿ ನನಗಾಗುತ್ತಿರುವ ಅವಮಾನದಿಂದ ತೀವ್ರ ನೊಂದಿರುವ ನಾನು, ನನ್ನ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದಿದ್ದು, ನೀವು ನೀಡುವ ಸಲಹೆ ಮತ್ತು ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ರಾಜಕೀಯ ಹೆಜ್ಜೆ ಇಡುತ್ತೇನೆ ಎಂದರು. ಈಗಲೂ ಮುಖ್ಯಮಂತ್ರಿ ನನ್ನೊಂದಿಗೆ ಮುಖಾಮುಖಿ ಮಾತನಾಡಿದರೆ ಅವರ ಜತೆ ಎಲ್ಲಾ ವಿಚಾರವನ್ನು ತೆರೆದಿಡುತ್ತೇನೆ. ಆದರೆ ಮಧ್ಯವರ್ತಿಗಳು ನಮ್ಮ ನಡುವೆ ವ್ಯವಹರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಜಿ.ಪಂ. ಸದಸ್ಯ ಅಮಿತ್.ವಿ.ದೇವರಹಟ್ಟಿ, ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ತಾ.ಪಂ. ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಮಾಜಿ ಉಪಾದ್ಯಕ್ಷ ಪುಟ್ಟರಾಜು ಸದಸ್ಯರಾದ ಎಂ.ನಾಗರಾಜು, ಜಯರಾಮೇಗೌಡ, ಜಿ.ಎಸ್.ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್.ರಾಜೇಗೌಡ, ಮಾಜಿ ನಿರ್ದೇಶಕ ರಾಜಶೇಖರ್, ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕ, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಬಿ.ಸುಬ್ರಮಣ್ಯ, ಕೆ.ಎಲ್.ರಾಜೇಶ್, ಪಿ.ಶಂಕರ್, ನಟರಾಜು, ಪೆರಿಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೈ.ಎಸ್.ಕುಮಾರ್, ನಿರ್ದೇಶಕ ಕೆ.ಎಸ್.ಮಹೇಶ್, ಮುಖಂಡರಾದ ಡಾ.ಮೆಹಬೂಬ್‌ಖಾನ್, ಹೆಚ್.ಪಿ.ಪರಶುರಾಮ್, ಎಸ್.ಪಿ.ಆನಂದ್, ಹೆಚ್.ಜೆ.ರಮೇಶ್, ರಾಜಶ್ರೀಕಾಂತ್, ಎಲ್.ಪಿ.ರವಿಕುಮಾರ್, ಎ.ಟಿ.ಗೋಪಾಲ್, ಎ.ಟಿ.ಶಿವಣ್ಣ, ನೀಲಕಂಠೇಗೌಡ, ಬಸಪ್ಪಾಜಿ, ಪೂರ್ಣಚಂದ್ರ, ಶ್ರೀನಿವಾಸ್, ಕ್ಯಾರೆನಾಗರಾಜು, ಸೈಯದ್‌ಅಸ್ಲಾಂ ಸೇರಿದಂತೆ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.