ಮನುವಾದ ಆಧಾರಿತ ಸಂವಿಧಾನ ಪ್ರತಿಷ್ಠಾಪಿಸುವ ಯತ್ನ: ಸನತ್‌ಕುಮಾರ್ ಬೆಳಗಲಿ ಆತಂಕ
ಮಂಡ್ಯ, ಎ.27: ಸಂವಿಧಾವನ್ನು ಬುಡಮೇಲು ಮಾಡುವ ಷಡ್ಯಂತ್ರವನ್ನು ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿದ್ದು, ದೇಶದ ಪ್ರಜಾಪ್ರಭುತ್ವ ನಾಶವಾಗಲಿದೆ. ಮನುವಾದ ಆಧಾರಿತ ಸಂವಿಧಾನ ಪ್ರತಿಷ್ಠಾಪಿಸುವ ಯತ್ನ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಸನತ್‌ಕುಮಾರ್ ಬೆಳಗಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಎರಡನೇ ದಿನವಾದ ಗುರುವಾರ ಅವರು ಪ್ರಸ್ತುತ ಸಂದರ್ಭದ ಬಿಕ್ಕಟ್ಟುಗಳು ಮತ್ತು ಮೀಸಲಾತಿ ವಿಷಯ ಕುರಿತು ವಿಚಾರ ಮಂಡಿಸಿದರು.
ಹಿಂದೂ ರಾಷ್ಟ್ರ ನಿರ್ಮಾಣದ ಸೋಗಿನಲ್ಲಿ ಚಾತುರ್ವರ್ಣಾಶ್ರಮ ಪದ್ಧತಿಯನ್ನು ಮರುಸ್ಥಾಪಿಸುವ ಹುನ್ನಾರ ನಡೆಯುತ್ತಿದ್ದು, ಅಂಬೇಡ್ಕರ್ ನೀಡಿರುವ ಸಮಾನತೆಯ ಸಂವಿಧಾನದ ಜಾಗದಲ್ಲಿ ಮನುವಾದ ಆಧಾರಿತ ಸಂವಿಧಾನ ಪ್ರತಿಷ್ಠಾಪಿಸುವ ಯತ್ನ ನಡೆಯುತ್ತಿದೆ ಎಂದು ಕಳವಳಪಟ್ಟರು.
ಪ್ರಸ್ತುತ ಸನ್ನಿವೇಶ ತುಂಬಾ ಅಪಾಯಕಾರಿಯಾಗಿದೆ. ಸಂಘಪರಿವಾರ, ಮನುವಾದಿಗಳು ಹೆಣೆಯುತ್ತಿರುವ ಷಡ್ಯಂತ್ರಕ್ಕೆ ದಲಿತರು, ಶೂದ್ರರು, ಎಡಪಂಥೀಯವಾದಿಗಳು, ಶೋಷಿತರು, ಬುದ್ಧಿಜೀವಿಗಳು ತಡೆಯೊಡ್ಡದಿದ್ದರೆ ಅಂಬೇಡ್ಕರ್ ಸಂವಿಧಾನ ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.
ಬಲಪಂಥೀಯರಿಗೆ 70 ವರ್ಷದ ಬದಲಾವಣೆಯನ್ನು ಸಹಿಸಲು ಆಗುತ್ತಿಲ್ಲ, ಜತೆಗೆ ಸರ್ವರಿಗೂ ಸಮಾನತೆ ಎನ್ನುವ ಅಂಬೇಡ್ಕರ್ ಸಂವಿಧಾನ ಒಗ್ಗುತ್ತಿಲ್ಲ. ಶೋಷಿತರು, ಅಸ್ಪ್ರಶ್ಯರು ಮೀಸಲಾತಿ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವುದು ಅವರಿಗೆ ಬೇಕಿಲ್ಲ. ಹೀಗೆಯೇ ಮುಂದುವರಿದರೆ ಮೀಸಲಾತಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದೂ ಬೆಳಗಲಿ ಹೇಳಿದರು.
ಮೋದಿ, ಪೇಜಾವರ ವಿರುದ್ಧ ಕಿಡಿ: ಇತ್ತ ಮಲದ ಗುಂಡಿ ಸ್ವಚ್ಛಮಾಡಲು ಹೋಗಿ ನೂರಾರು ದಲಿತರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಅತ್ತ, ಸ್ವಚ್ಛ ಭಾರತ ಹೆಸರಿನಲ್ಲಿ ಟಿವಿ, ಪತ್ರಿಕೆಗಳಿಗೆ ಕೋಟ್ಯಂತರ ರೂ. ಜಾಹಿರಾತು ನೀಡಿ ಪೋಸು ನೀಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ದೇಶೋದ್ಧಾರಕನಂತೆ ಮಾಧ್ಯಮಗಳು ಪ್ರತಿಬಿಂಬಿಸುತ್ತಿವೆ ಎಂದು ಅವರು ವಿಷಾದಿಸಿದರು.
"ಹಿಂದೂ ಒಂದು ಬಂಧು" ಎನ್ನುವ ಉಡುಪಿಯ ಪೇಜಾವರಶ್ರೀಗಳು, ದಲಿತರಿಗೆ ವೈಷ್ಣವ ದೀಕ್ಷೆ ನೀಡುತ್ತಿದ್ದಾರೆ. ಇದರಿಂದ ಹಿಂದೂಗಳು ಒಂದಾಗಲು ಸಾಧ್ಯವೇ ಇಲ್ಲ. ಬದಲಾಗಿ ತಮ್ಮ ಮಠ ಮತ್ತು ದೇವಾಲಯಗಳಿಗೆ ದಲಿತರನ್ನು ನೇಮಕ ಮಾಡಿ ಇದುವರೆಗೆ ದಲಿತರು ಮಾಡುತ್ತಿರುವ ಮಲದ ಗುಂಡಿ ಸ್ವಚ್ಛತಾ ಕಾರ್ಯವನ್ನು ತಮ್ಮವರಿಗೆ ವಹಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಲೇಖಕ ಡಾ.ಜಗದೀಶ್ ಕೊಪ್ಪ ಮಾತನಾಡಿ, ಮೀಸಲಾತಿಯ ಓಲೈಕೆ ರಾಜಕಾರಣದಿಂದಾಗಿ ಎಲ್ಲಾ ವರ್ಗದವರು ಮೀಸಲಾತಿಗಾಗಿ ಹೋರಾಟ ನಡೆಸುವಂತಾಗಿರುವುದು ಮೀಸಲಾತಿ ಕುರಿತ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಸ್ಲಿಮರನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ಸಾಕು ಹಸುವನ್ನು ಹಿಡಿದುಕೊಂಡು ಹೋಗುವ ದಲಿತರು ,ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.
ವಿಶ್ವಮಾನವ ಸಂದೇಶದ ಅನುಷ್ಠಾನ ಕುರಿತು ಕವಿ ಹಾಗೂ ಲೇಖಕ ಪ್ರೊ. ಎಲ್.ಎನ್.ಮುಕುಂದರಾಜ್, ಪ್ರಜಾಪ್ರಭುತ್ವದ ಜಾತ್ಯತೀತ ವ್ಯವಸ್ಥೆ ಬಲಪಡಿಸುವ ಅವಶ್ಯಕತೆ ಕುರಿತು ಖ್ಯಾತ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಮಾತನಾಡಿದರು. ಸಂದೇಹಗಳಿಗೆ ಪರಿಹಾರ ಕುರಿತ ಸಂವಾದವನ್ನು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ನಡೆಸಿಕೊಟ್ಟರೆ, ದಲಿತರು ಮತ್ತು ಕಂದಾಯ ಕಾಯ್ದೆಗಳು ಕುರಿತು ಸಮಾಜವಾದಿ ಚಿಂತಕ ರುದ್ರಪ್ಪ ಹನಗವಾಡಿ ವಿಷಯ ಮಂಡಿಸಿದರು.
ಶಿಬಿರ ಉದ್ಘಾಟಿಸಿದ ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮಹಿಳೆಯರು, ಅದರಲ್ಲೂ ಗ್ರಾಮೀಣ ಪ್ರದೇಶದ ದಲಿತ ಮಹಿಳೆಯರ ಸಬಲೀಕರಣವಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಮಹಿಳೆಯರು ಹೆಚ್ಚು ಶೋಷಣೆಗೊಳಗಾಗುತ್ತಿದ್ದಾರೆ. ರೈತರ ಭೂಮಿ ಕಾರ್ಪೋರೇಟ್ ಕುಳಗಳ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಖಜಾಂಚಿ ಸಾಗ್ಯಕೆಂಪಣ್ಣ, ಹುಲ್ಲೇಗಾಲ ಶಿವಕುಮಾರ್, ಗೌರಮ್ಮ, ಬಸವರಾಜು, ಜಯರಾಜು, ಇತರರು ಉಪಸ್ಥಿತರಿದ್ದರು.