ಸ್ಪರ್ಧಾತ್ಮಕ ಪರೀಕ್ಷೆ: ಅಗತ್ಯ ಕ್ರಮಕ್ಕೆ ಮಡಿಕೇರಿ ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ, ಎ.27: ಅಬಕಾರಿ ಇಲಾಖೆಯ ಉಪ ನಿರೀಕ್ಷಕರು ಮತ್ತು ಅಬಕಾರಿ ರಕ್ಷಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಎ.30 ಮತ್ತು ಮೇ 7ರಂದು ನಡೆಯಲಿದ್ದು, ಪರೀಕ್ಷೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಬೇಕು ಎಂದು ಪೊಲೀಸ್ ಅಧಿಕಾರಿ ಅವರಿಗೆ ಸೂಚಿಸಿದರು.
ಅಬಕಾರಿ ಉಪ ಆಯುಕ್ತರಾದ ಡಿ.ಸಿ.ಶೈಲಜಾ ಅವರು ಪರೀಕ್ಷೆಯ ವಿವರಗಳ ಮಾಹಿತಿ ನೀಡಿ, ಎ.30ರಂದು ಅಬಕಾರಿ ಉಪ ನಿರೀಕ್ಷಕರ ಪರೀಕ್ಷೆಯ ಪತ್ರಿಕೆ-1 ವಿವರಣಾತ್ಮಕ ಪರೀಕ್ಷೆಯು ಬೆಳಗ್ಗೆ 10ರಿಂದ 11:30ರವರೆಗೆ ಮತ್ತು ಪತ್ರಿಕೆ-2 ಸಾಮಾನ್ಯ ಅಧ್ಯಯನ ವಸ್ತುನಿಷ್ಠ ಬಹು ಆಯ್ಕೆ ಮಾದರಿ ಪರೀಕ್ಷೆಯು ಮಧ್ಯಾಹ್ನ 2ರಿಂದ 3:30ರವರೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಮುಖ್ಯೋಪಾಧ್ಯಾಯರು, ಸಂತ ಜೋಸೆಫ್ ಕಾನ್ವೆಂಟ್, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು.