ಬೀದಿಗೆ ಬಂದ ಬಿಜೆಪಿಯ ಅಂತಃಕಲಹ

Update: 2017-04-28 03:54 GMT

  ‘ಕಾಂಗ್ರೆಸ್ ಮುಕ್ತ ಭಾರತ’ಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆ ಕೊಡುತ್ತಲೇ ಇದ್ದಾರೆ. ಅದಕ್ಕಾಗಿ ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ, ಕರ್ನಾಟಕದ ಬಿಜೆಪಿ ನಾಯಕರು ಬಿಜೆಪಿ ಮುಕ್ತ ಕರ್ನಾಟಕ ಮಾಡಲು ಪಣತೊಟ್ಟಿದ್ದಾರೆ. ಕರ್ನಾಟಕದ ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಇವರಿಬ್ಬರೂ ಸೇರಿ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿದ್ದು ನಿಜ. ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ಈಶ್ವರಪ್ಪ ಹಾಗೂ ಚಿಕ್ಕ ಹತ್ತಿಗಿರಣಿ ಇಟ್ಟುಕೊಂಡಿದ್ದ ಯಡಿಯೂರಪ್ಪ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, ಅನಿರೀಕ್ಷಿತವಾಗಿ ದೊರೆತ ಅಧಿಕಾರ ಅವರಿಬ್ಬರನ್ನು ಶತ್ರುಗಳನ್ನಾಗಿ ಮಾಡಿತ್ತು. ಅಧಿಕಾರದಲ್ಲಿದ್ದಾಗ ಮಾತ್ರವಲ್ಲ, ಅಧಿಕಾರ ಹೋದನಂತರವೂ ಅವರು ಕಾದಾಡುತ್ತಲೇ ಬಂದಿದ್ದಾರೆ. ಇದಕ್ಕೆ ಮೂಲ ಕಾರಣ ಇವರಿಬ್ಬರಿಗೂ ಇರುವ ಸಂಪತ್ತಿನ ವ್ಯಾಮೋಹ. ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಯಾರನ್ನಾದರೂ ಕೇಳಿದರೆ ಅಲ್ಲಿನ ಮುಖ್ಯರಸ್ತೆಯ ಎರಡೂ ಬದಿಯ ನಿವೇಶನಗಳು ಮತ್ತು ಬಹುಅಂತಸ್ತಿನ ಕಟ್ಟಡಗಳನ್ನು ತೋರಿಸಿ ಇದು ಈಶ್ವರಪ್ಪನವರದ್ದು, ಇದು ಯಡಿಯೂರಪ್ಪನವರದ್ದು ಎಂದು ಹೇಳುತ್ತಾರೆ.

ವ್ಯಕ್ತಿಯ ಚಾರಿತ್ರವನ್ನು ನಿರ್ಮಾಣ ಮಾಡುವುದಾಗಿ ಹೇಳಿಕೊಳ್ಳುವ ಆರೆಸ್ಸೆಸ್ ಶಾಖೆಯಲ್ಲಿ ಬೆಳೆದುಬಂದ ಇವರಿಬ್ಬರು ಭ್ರಷ್ಟಾಚಾರ ಹಗರಣದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಒಬ್ಬರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕರೆ, ಇನ್ನೊಬ್ಬರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ. ಅದು ಒತ್ತಟ್ಟಿಗಿರಲಿ. ಆದರೆ, ಈಗ ಇವರು ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಇವರ ಬೀದಿ ಕಾಳಗವನ್ನು ನೋಡಿ ರಾಜ್ಯದ ಜನ ನಗುತ್ತಿದ್ದಾರೆ. ಇವರಿಬ್ಬರ ಕಾಳಗಕ್ಕೆ ಒಂದು ದಶಕದ ಇತಿಹಾಸವಿದೆ. ಆಗಾಗ ಒಂದಾಗಿರುವಂತೆ ತೋರಿಸಿಕೊಂಡರೂ ಶೀತಲ ಸಮರ ನಡೆಯುತ್ತಲೇ ಬಂದಿದೆ. ಈ ಶೀತಲ ಸಮರಕ್ಕೆ ಪ್ರಚೋದನೆ ನೀಡುವ ಜನರೂ ಸಾಕಷ್ಟಿದ್ದಾರೆ.

  ಕೆ.ಎಸ್. ಈಶ್ವರಪ್ಪನವರು ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಿನ್ನಮತೀಯ ಕಾರ್ಯಕರ್ತರ ಸಮಾವೇಶವೊಂದನ್ನು ನಡೆಸಿದರು. ಈ ಸಮಾವೇಶದಲ್ಲಿ ಸೊಗಡು ಶಿವಣ್ಣ, ಭಾನುಪ್ರಕಾಶ್, ಸೋಮಣ್ಣ, ರವೀಂದ್ರನಾಥ್ ಮುಂತಾದವರು ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಈಶ್ವರಪ್ಪನವರು ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ‘‘ನಾನು ತಂದೆತಾಯಿಗೆ ಹುಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ’’ ಎಂದು ಹೇಳಿದ್ದಾರೆ. ಇದೇ ಸಮಾವೇಶದಲ್ಲಿ ಇನ್ನೊಬ್ಬ ಬಿಜೆಪಿ ನಾಯಕ ಭಾಷಣ ಮಾಡಿ ಯಡಿಯೂರಪ್ಪನವರನ್ನು ಟೀಕಿಸಿದಾಗ ಅಲ್ಲಿ ಸೇರಿದ್ದ ಯಡಿಯೂರಪ್ಪ ಬೆಂಬಲಿಗರು ಪ್ರತಿಭಟಿಸಿದ್ದಾರೆ. ಆಗ ಅವರ ಮೇಲೆ ಹಲ್ಲೆ ಮಾಡಿ ಸಭೆಯಿಂದ ಹೊರಹಾಕಲಾಗಿದೆ. ಈ ಎಲ್ಲ ಘಟನೆಗಳ ನಂತರ ಬೆಂಗಳೂರಿನ ಡಾಲರ್ಸ್‌ ಕಾಲನಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪನವರು,ಈಶ್ವರಪ್ಪ ಮತ್ತು ಆರೆಸ್ಸೆಸ್ ನಾಯಕ ಸಂತೋಷ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ವಿರುದ್ಧ ಸಂತೋಷ್ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವು ಆರೆಸ್ಸೆಸ್ ನಾಯಕರ ಪ್ರಚೋದನೆಯೇ ಭಿನ್ನಮತೀಯರ ಸಮಾವೇಶಕ್ಕೆ ಕಾರಣ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ. ಈಶ್ವರಪ್ಪನವರ ಹಿಂದಿರುವ ಮೆದುಳು ಯಾರದೆಂಬುದು ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ ಎಂದು ಆರೆಸ್ಸೆಸ್ ನಾಯಕ ಸಂತೋಷ್ ಅವರಿಗೆ ಯಡಿಯೂರಪ್ಪ ಚುಚ್ಚಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಸೋತು ನಾಲ್ಕನೆಯ ಸ್ಥಾನದಲ್ಲಿದ್ದರು ಎಂದು ವ್ಯಂಗ್ಯ ವಾಡಿದ ಯಡಿಯೂರಪ್ಪ, ‘‘ ಅವರನ್ನು ವಿಧಾನಪರಿಷತ್‌ಗೆ ತಂದು ಪ್ರತಿಪಕ್ಷ ನಾಯಕನನ್ನಾಗಿ ಮಾಡಿದ್ದು ನಾನು. ಈಗ ಅವರು ನನಗೆ ದ್ರೋಹ ಬಗೆದಿದ್ದಾರೆ’’ ಎಂದು ಆಪಾದಿಸಿದ್ದಾರೆ.

  ಈ ನಡುವೆ ಭ್ರಷ್ಟಾಚಾರದ ಆರೋಪದ ಮೇಲೆ ತಮ್ಮ ನಾಯಕನ ಜೊತೆಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ, ಈಶ್ವರಪ್ಪನವರಿಗೆ ನಾಲ್ಕು ಜನರನ್ನು ವಿಧಾನಸಭೆಗೆ ಗೆಲ್ಲಿಸಿ ಕಳುಹಿಸುವ ತಾಕತ್ತು ಇಲ್ಲ. ಇಂತಹವರು ಪ್ರತ್ಯೇಕ ಸಮಾವೇಶ ಮಾಡಿ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ ಶಾಸಕರ ಇನ್ನೊಂದು ಗುಂಪು ಕೂಡಾ ಮತ್ತೊಂದು ಪತ್ರಿಕಾಗೋಷ್ಠಿ ಮಾಡಿ ಈಶ್ವರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ, ಈಗ ಬೀದಿಗೆ ಬಂದಿರುವ ಬಿಜೆಪಿಯ ಆಂತರಿಕ ಜಗಳ ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಉಂಟಾದ ಸೋಲಿಗೆ ಯಡಿಯೂರಪ್ಪನವರ ವೈಫಲ್ಯವೇ ಕಾರಣ ಎಂದು ಈಶ್ವರಪ್ಪ ಮುಂತಾದವರು ಆರೋಪಿಸುತ್ತಿದ್ದಾರೆ. ಯಡಿಯೂರಪ್ಪನವರ ಹಿಂದೆ ಲಿಂಗಾಯತರು ಇದ್ದಾರೆಂದು ಭಾವಿಸಿ ಅವರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಲಾಯಿತು. ಆದರೆ, ಲಿಂಗಾಯತರ ಬೆಂಬಲ ಅವರಿಗೆ ಇಲ್ಲ ಎಂಬುದು ಈ ಉಪಚುನಾವಣೆಯಿಂದ ಸ್ಪಷ್ಟವಾಗಿದೆ ಎಂಬುದು ಈಶ್ವರಪ್ಪ ಗುಂಪಿನ ಅಭಿಪ್ರಾಯವಾಗಿದೆ. ಮೇಲ್ನೋಟಕ್ಕೆ ಇದು ಯಡಿಯೂರಪ್ಪ-ಈಶ್ವರಪ್ಪ ನಡುವಿನ ಜಗಳದಂತೆ ಕಾಣುತ್ತದೆ. ಆದರೆ, ಆಳಕ್ಕೆ ಇಳಿದು ನೋಡಿದರೆ ದಿಲ್ಲಿ ಮೂಲದ ಹಾಗೂ ಆರೆಸ್ಸೆಸ್‌ನ ಕಾಣದ ಕೈಗಳು ಈ ಜಗಳದ ಹಿಂದೆ ಇರುವುದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪನವರನ್ನು ಶೋಭಾ ಕರಂದ್ಲಾಜೆ ನಿಯಂತ್ರಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡಿರುವ ಬಿಜೆಪಿಯಲ್ಲಿನ ಒಂದು ಗುಂಪು ಕೂಡಾ ಈಶ್ವರಪ್ಪನವರ ಜೊತೆಗೆ ಸೇರಿದೆ. ಅಷ್ಟೇ ಅಲ್ಲ ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಈಶ್ವರಪ್ಪನವರ ಕಿವಿ ಊದಿ ಈ ಕಾಳಗಕ್ಕೆ ಇಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಬಿಜೆಪಿಯನ್ನು ಮುಂಚಿನಿಂದಲೂ ನಿಯಂತ್ರಿಸುತ್ತಾ ಬಂದಿರುವ ಆರೆಸ್ಸೆಸ್ ಯಡಿಯೂರಪ್ಪನವರ ವಿರುದ್ಧ ಈಶ್ವರಪ್ಪನವರನ್ನು ಎತ್ತಿಕಟ್ಟಿದೆ ಎಂದು ಬಿಜೆಪಿಯ ಆಂತರಿಕ ವಲಯಗಳೇ ಹೇಳುತ್ತವೆ. ಯಡಿಯೂರಪ್ಪನವರಿಗೆ ಲಿಂಗಾಯತರ ಬೆಂಬಲ ಇಲ್ಲವಾದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರ ನಾಯಕತ್ವದ ಅಗತ್ಯ ಇಲ್ಲವೆಂಬುದು ಸಂಘಪರಿವಾರದ ಬಹುತೇಕರ ಅಭಿಪ್ರಾಯವಾಗಿದೆ. ಹೀಗಾಗಿ ಈ ಎಲ್ಲ ಶಕ್ತಿಗಳು ಸೇರಿ ಈಶ್ವರಪ್ಪನವರನ್ನು ಛೂಬಿಟ್ಟು ಈ ಸಮಾವೇಶವನ್ನು ಸಂಘಟಿಸಿದೆ.

  ಈ ವಿದ್ಯಮಾನಗಳನ್ನು ಗಮನಿಸಿದರೆ ಯಡಿಯೂರಪ್ಪನವರ ತಪ್ಪು ಕೂಡಾ ಸಾಕಷ್ಟಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಗೆ ಬಂದು ಅವರು ಸಂಘಟಿಸಿದ ಕೆಜೆಪಿ ಪಕ್ಷಕ್ಕೆ ಕೆಲ ಪ್ರದೇಶಗಳಲ್ಲಿ ಜನ ಬೆಂಬಲ ವ್ಯಕ್ತವಾಗಿತ್ತು. ಪ್ರಾದೇಶಿಕ ಪಕ್ಷವಾಗಿ ಅದನ್ನು ಉಳಿಸಿಕೊಂಡಿದ್ದರೆ ರಾಜ್ಯ ರಾಜಕಾರಣದಲ್ಲಿ ಅವರು ನಿರ್ಣಾಯಕರಾಗುತ್ತಿದ್ದರು. ಆದರೆ, ಮತ್ತೆ ಬಿಜೆಪಿಗೆ ಶರಣಾಗತರಾಗಿ ಯಡಿಯೂರಪ್ಪ ತನ್ನ ರಾಜಕೀಯ ಭವಿಷ್ಯವನ್ನು ತಾನೇ ಹಾಳುಮಾಡಿಕೊಂಡರು. ಈಗ ಅವರಿಗೆ ಮುಂದಿನ ದಿನಗಳು ಅಷ್ಟು ಸುಲಭವಲ್ಲ ಎಂಬುದು ಗುರುವಾರದ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News