ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರಗಾಲ: ನೀರು, ಮೇವಿಲ್ಲದೆ ಸಂಕಷ್ಟದಲ್ಲಿ ಜಾನುವಾರುಗಳು

Update: 2017-04-28 10:51 GMT

ಚಿಕ್ಕಮಗಳೂರು, ಎ.28: ಚಿಕ್ಕಮಗಳೂರು ಜಿಲ್ಲೆ ಅಕ್ಷರಶ: ಬರಗಾಲಕ್ಕೆ ತುತ್ತಾಗಿದ್ದು, ಒಂದು ಕಡೆ ಜನರು ಹನಿ ನೀರಿಗಾಗಿ ಪರಿತಪಿಸುತ್ತಿದ್ದರೆ, ಮತ್ತೊಂದೆಡೆ ಜಾನುವಾರುಗಳು ಮೇವಿಗಾಗಿ ಪರದಾಡುತ್ತಿವೆ.

ಪ್ರಾಕೃತಿಕ ಸಮೃದ್ಧಿಗೆ ಹೆಸರಾಗಿದ್ದ ಚಿಕ್ಕಮಗಳೂರು ಜಿಲ್ಲೆ ಬರಗಾಲಪೀಡಿತ ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಜನರು ಕುಡಿಯುವ ನೀರಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ಜಿಲ್ಲಾಡಳಿತಕ್ಕೆ ಸವಾಲಿನದ್ದಾಗಿ ಪರಿಣಮಿಸಿದೆ. ಅರಣ್ಯಗಳಲ್ಲಿ ಕಾಡು ಪ್ರಾಣಿಗಳು ಕುಡಿಯುವ ನೀರು ಸಿಗದೆ ನಾಡಿನೊಳಗೆ ಲಗ್ಗೆ ಇಡುತ್ತಿದೆ.

ಮಳೆ ಬೀಳದ ಪ್ರದೇಶಗಳಲ್ಲಿ ಹಸಿರು ಹುಲ್ಲು ಕಣ್ಮರೆಯಾಗಿದ್ದು, ರೈತರು ಜಾನುವಾರುಗಳನ್ನು ಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ರೈತರು ಹೈನುಗಾರಿಕೆ ಆದಾಯದ ಮೂಲ ಕಂಡುಕೊಂಡಿದ್ದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಜಾನುವಾರುಗಳನ್ನು ಬದುಕಿಸಿಕೊಳ್ಳಲು ಪರ್ಯಾಯ ಮೇವಿನ ಮೊರೆ ಹೋಗುತ್ತಿದ್ದಾರೆ. ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರು ತಮ್ಮ ಹಸುಗಳನ್ನು ಉಳಿಸಿಕೊಳ್ಳಲು ಅಡಿಕೆ ಹಾಳೆಯನ್ನು ಹಸುಗಳಿಗೆ ಹಾಕಿ ಹೊಟ್ಟೆ ತುಂಬಿಸುತ್ತಿದ್ದಾರೆ. ಅಡಿಕೆ ಹಾಳೆಗಳನ್ನು ಹಸುಗಳಿಗೆ ಸತತವಾಗಿ ಹಾಕುವುದರಿಂದ ಹಸುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಸಹ ಬೀರುತ್ತದೆ ಎನ್ನುವ ಆತಂಕವೂ ರೈತರಲ್ಲಿದೆ.

ಇಂತಹ ಸಮಸ್ಯೆಗಳ ಬಗ್ಗೆ ಅರಿವಿರದ್ದರೂ ಜಿಲ್ಲಾಡಳಿತ ಈ ಭಾಗದಲ್ಲಿ ಮೇವು ಕೇಂದ್ರ ತರೆಯುವ ಅಥವಾ ರೈತರಿಗೆ ಮೇವು ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದು ರೈತರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ನಿಡಘಟ್ಟ, ಕಳಸಾಪುರ, ಬೆಳವಾಡಿ ಸೇರಿದಂತೆ ಲಕ್ಯಾ ಹೋಬಳಿಯಲ್ಲಿ ಹಸುಗಳನ್ನು ಸಾಕುವುದು ರೈತರಿಗೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಿಲ್ಲಾಡಳಿತ ಬರ ನಿರ್ವಹಣೆಗೆಂದು ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಬಳವಸಿಕೊಂಡು ಈಗಲಾದರೂ ಜಾನುವಾರುಗಳ ಹೊಟ್ಟೆ ತುಂಬಿಸುವ ಜೊತೆಗೆ ಬರದಲ್ಲೂ ರೈತರಿಗೆ ಆಸರೆಯಾಗುತ್ತಿರುವ ಹಸುಗಳಿಗೆ ಮೇವನ್ನು ಒದಗಿಸುವ ಮನಸ್ಸು ಮಾಡದಿದ್ದರೆ ಬರದಿಂದ ಬಳಲಿರುವ ರೈತರು ಮತ್ತಷ್ಟು ಕಂಗಾಲಾಗುವುದರಲ್ಲಿ ಅನುಮಾನವಿಲ್ಲ

ಈ ಬಾರಿ ಮಳೆ ಬೀಳುವವರೆಗೆ ಹಸುಗಳು ಹಾಲು ಕೊಡದಿದ್ದರೂ ಪರವಾಗಿಲ್ಲ. ಬರಗಾಲದಲ್ಲಿ ಹಸುಗಳನ್ನು ಸಾಕಲು ಕಷ್ಟವಾಗುತ್ತಿದೆ. ಮೇವಿನ ಕೊರತೆ ಇರುವುದರಿಂದ ದಿನನಿತ್ಯ ಅಡಿಕೆ ಹಾಳೆಯನ್ನು ತಂದು ಹಸುಗಳ ಹೊಟ್ಟೆ ತುಂಬಿಸಬೇಕಾಗಿದೆ. ಆದರೆ ಅಡಿಕೆ ತೋಟದ ಮಾಲಕರು ಅಡಿಕೆ ಹಾಳೆಯನ್ನು ತೆಗೆದುಕೊಂಡು ಹೋಗುವುದಕ್ಕು ಬಿಡುತ್ತಿಲ್ಲ

-ಗುರುಶಾಂತಪ್ಪ, ರೈತ, ಚಿಕ್ಕಮಗಳೂರು.

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News