ದಿಡ್ಡಳ್ಳಿ ಬಿಡಲು ಸಿದ್ಧರಾದ ನಿರಾಶ್ರಿತರು: ಹಕ್ಕುಪತ್ರ ನೀಡಲು ಜಿಲ್ಲಾಡಳಿತದಿಂದ ಕ್ರಮ
ಮಡಿಕೇರಿ, ಎ.28: ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ-ಮದಲಾಪುರದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನಗಳಿಗೆ ಒಂದು ವಾರದೊಳಗೆ ಹಕ್ಕುಪತ್ರ ವಿತರಿಸಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಿಡ್ಡಳ್ಳಿ ಪುನರ್ ವಸತಿ ಸಮಿತಿ ಸಭೆಯಲ್ಲಿ ನಿರಾಶ್ರಿತ ಆದಿವಾಸಿಗಳ ಅಭಿಪ್ರಾಯ ಪಡೆದು ನಿವೇಶನ ಹಕ್ಕುಪತ್ರ ವಿತರಿಸುವ ಬಗ್ಗೆ ಚರ್ಚಿಸಲಾಯಿತು.
ಸಮಿತಿ ಸದಸ್ಯರಾದ ಸ್ವಾಮಿ ಮಾತನಾಡಿ, ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ-ಮದಲಾಪುರಕ್ಕೆ ನಿರಾಶ್ರಿತರು ತೆರಳಲು ಸಿದ್ಧ. ಆದರೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರಿನಲ್ಲಿ ಗುರುತಿಸಲಾಗಿರುವ ಜಾಗ ಬೇಡ ಎಂದು ಹೇಳಿದರು. ಮತ್ತೊಬ್ಬ ಸಮಿತಿ ಸದಸ್ಯರಾದ ಅನಿತಾ ಮಾತನಾಡಿ, ದಿಡ್ಡಳ್ಳಿಯಲ್ಲಿಯೇ ಜಾಗ ನೀಡಿ ಎಂದು ನಿರಾಶ್ರಿತರು ಕೇಳುವುದಿಲ್ಲ. ಎಲ್ಲರಿಗೂ ಒಂದೇ ಕಡೇ ನಿವೇಶನ ನೀಡಿದರೆ ಒಳ್ಳೆಯದು ಎಂಬುದು ನಿರಾಶ್ರಿತರ ಭಾವನೆಯಾಗಿದೆ. ಆದರೆ ಕೆದಮುಳ್ಳೂರು ಗ್ರಾಮದಲ್ಲಿ ಪುನರ್ ವಸತಿ ಬೇಡ ಎಂದರು.
ಉದ್ಯೋಗ ಖಾತ್ರಿ: ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ದಿಡ್ಡಳ್ಳಿ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು. ಅದಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ನಿವೇಶನ ಹಕ್ಕುಪತ್ರ ಪಡೆದ ನಂತರ ಮನೆ ನಿರ್ಮಾಣ, ಯುವ ಜನರು ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ತರಬೇತಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಕೊಡಿಸಿ ಉದ್ಯೋಗ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಹೆಚ್ಚುವರಿ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಹಕ್ಕುಪತ್ರ ನೀಡುವುದಕ್ಕೂ ಮೊದಲು ನಿವೇಶನದಾರರ ಭಾವಚಿತ್ರವನ್ನು ತೆಗೆಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಜಿಲ್ಲಾಧಿಕಾರಿ, ಆಹಾರ, ಅಕ್ಕಿ ವಿತರಣೆ ಮುಂದುವರಿಸುವಂತೆ ಕೋರಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಅಗತ್ಯ ಪ್ರಸ್ತಾಪ ಸಲ್ಲಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ತಿಳಿಸಿದರು.
ಪರ್ಯಾಯ ಜಾಗದ ವ್ಯವಸ್ಥೆ: ಕೆದಮುಳ್ಳೂರು ಗ್ರಾಮದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನದಾರರಿಗೆ ಆ ಜಾಗ ಬೇಡದಿದ್ದಲ್ಲಿ ಪರ್ಯಾಯ ಜಾಗ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್ ಮಾತನಾಡಿ, ಫೋಟೊ ತೆಗೆಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಬಸವನಹಳ್ಳಿಯಲ್ಲಿ 181 ಕುಟುಂಬಗಳಿಗೆ, ಬ್ಯಾಡಗೊಟ್ಟದಲ್ಲಿ 171 ಕುಟುಂಬಗಳಿಗೆ ಮತ್ತು ಕೆದಮುಳ್ಳೂರು ಗ್ರಾಮದಲ್ಲಿ 176 ಕುಟುಂಬಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರು ಮತ್ತು ವಿದ್ಯುದ್ದೀಕರಣ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಮಾತನಾಡಿ, ಐಟಿಡಿಪಿ ಇಲಾಖೆ ಮೂಲಕವೇ ಫೋಟೊ ತೆಗೆಸುವುದು ಮತ್ತು ಜಾಬ್ ಕಾರ್ಡ್ ಕೊಡಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು. ಜಿಪಂ ಯೋಜನಾ ನಿರ್ದೇಶಕರಾದ ಸಿದ್ದಲಿಂಗಮೂರ್ತಿ ದಿಡ್ಡಳ್ಳಿ ಜನರಿಗೆ ಹಕ್ಕು ಪತ್ರ ವಿತರಣೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಸಮಿತಿ ಸದಸ್ಯರಾದ ಸುಬ್ರಮಣಿ, ಐಟಿಡಿಪಿ ಇಲಾಖೆ ವಿರಾಜಪೇಟೆ ತಾಲ್ಲೂಕು ಅಧಿಕಾರಿ ಚಂದ್ರಶೇಖರ್, ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕರಾದ ಸಚಿನ್, ಕೆಆರ್‌ಡಿಎಲ್ ಸಹಾಯಕ ಎಂಜಿನಿಯರ್ ಪ್ರಮೋದ್ ಇತರರು ಹಾಜರಿದ್ದರು.