ಕೊಳಗೇರಿ ಸಮಸ್ಯೆಗಳ ಬಗ್ಗೆ ಸಭೆ ಕರೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ತುಮಕೂರು, ಎ.28: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳ ಸಮಸ್ಯೆಗೆ ಸಂಬಂಧಿಸಿದ್ದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಕೋಶ, ಕಂದಾಯ ಇಲಾಖೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮತ್ತು ಕೊಳಗೇರಿ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡ ಜಂಟಿ ಸಭೆ ಕರೆಯಬೇಕೆಂದು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಿಗೆ ಸರಳಾ ಖಾತೆ ಮಾಡುವುದು, ರಾಜೀವ್ ಅವಾಸ್ ಯೋಜನೆಯಲ್ಲಿ ಪುನರ್ ವಸತಿಗೆ ಆಯ್ಕೆ ಮಾಡಿರುವ ಕೊಳಚೆ ಪ್ರದೇಶಗಳ ಆಯ್ಕೆ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸುವುದು, ರಾಜೀವ್ ಅವಾಸ್ ಯೋಜನೆಯಲ್ಲಿ ದಿಬ್ಬೂರಿನಲ್ಲಿ ನಿರ್ಮಾಣವಾಗುತ್ತಿವ ಜಿ+2 ಮತ್ತು 6 ಕೊಳಚೆ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಒಂಟಿ ಮನೆಗಳ ಕಳಪೆ ಕಾಮಗಾರಿ ತಡೆಯುವುದು, ನಗರ ಪಾಲಿಕೆಯ ಶೇ. 24.10%ರ ಕ್ರಿಯಾಯೋಜನೆ ಮತ್ತು ಸಮುದಾಯ ಅಗತ್ಯತೆಗಳ ಬಗ್ಗೆ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡುವುದು, ಘೋಷಿತ ಕೊಳಚೆ ಪ್ರದೇಶಗಳಿಗೆ ಮಂಡಳಿಯ ಕಾಯ್ದೆ ಸೆಕ್ಷನ್ 4/2 ಪ್ರಕಾರ ನೊಂದಣಿ ಪ್ರಮಾಣ ಪತ್ರ ನೀಡುವುದು, ದಿಬ್ಬೂರಿನ ವಸತಿ ಸಮುಚ್ಚಯಗಳಿಗೆ ಸ್ಥಳಾಂತರಗೊಂಡಿರುವ 70 ಕುಟುಂಬಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರು ಸೌಲಭ್ಯ ಒದಗಿಸುವುದು ಹಾಗೂ ಲೈಂಗಿಕ ವೃತ್ತಿ ನಿರತ ಮಹಿಳೆಯರಿಗೆ ಅವರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ತ್ರಿಪಕ್ಷಿಯ ಸಭೆ ಕರೆಯಲು ಮನವಿಯಲ್ಲಿ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಕೊಳಗೇರಿ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಉಪಾಧ್ಯಕ್ಷ ದೀಪಿಕಾ ಅಟೇಕರ್,ಕಾರ್ಯದರ್ಶಿ ಶೆಟ್ಟಾಳಯ್ಯ, ಖಜಾಂಚಿ ಕಣ್ಣನ್, ಪದಾಧಿಕಾರಿ ಅರುಣ್, ಮುರುಗ,ಚೆಲುವರಾಜ್, ಕಾಶೀರಾಜ್‌ನೂಪು, ಶೃತಿ, ಕೇಂಪೇಶ್ವರಿ, ಮಂಜುನಾಥ್ ಉಪಸ್ಥಿತರಿದ್ದರು.