×
Ad

ಅಗ್ಗದ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ: ಕಾಯ್ದೆ ತಿದ್ದುಪಡಿಗೆ ಅಂತಿಮ ರೂಪ

Update: 2017-04-28 19:36 IST

ಬೆಂಗಳೂರು, ಎ. 28: ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಂಬಂಧ 2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂ ಜಿತ್‌ಸೇನ್ ನೇತೃತ್ವದ ಸಮಿತಿ ತನ್ನ ವರದಿಯನ್ನು ಅಂತಿಮಗೊಳಿಸಿದೆ.

ಈ ಸಂಬಂಧ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ನ್ಯಾ.ವಿಕ್ರಂ ಜಿತ್‌ಸೇನ್, ಬಡವರಿಗೆ ಸರಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಇರಬೇಕು ಎಂಬ ದೃಷ್ಟಿಯಿಂದ ಸಮಗ್ರವಾಗಿ ಅಧ್ಯಯನ ನಡೆಸಲಾಗಿದೆ ಎಂದರು.

ಆರೋಗ್ಯ ಸೇವೆ ಮತ್ತು ವೈದ್ಯಕೀಯ ಚಿಕಿತ್ಸೆ ಎಲ್ಲ ರೋಗಿಗಳಿಗೂ ಏಕರೂಪದಲ್ಲಿ ಇರಬೇಕೆಂಬ ಉದ್ದೇಶದಿಂದ 2007ರ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಸೂಚಿಸಲಾಗಿದೆ ಎಂದ ಅವರು, ಕಾಯ್ದೆಯಲ್ಲಿ ಖಾಸಗಿ ಆಸ್ಪತ್ರೆಗಳು ಎಂಬ ಪದವನ್ನು ತೆಗೆಯಬೇಕೆಂಬುದು ತಮ್ಮ ಅಭಿಪ್ರಾಯ ಎಂದರು.

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆಂಬ ಭಿನ್ನತೆ ಇಲ್ಲದೆ ಎಲ್ಲ ಕಡೆಗಳಲ್ಲಿಯೂ ಏಕರೂಪದ ಚಿಕಿತ್ಸೆ ಶುಲ್ಕ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಸಿಗಬೇಕು. ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ ಸರಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ವೈದ್ಯಕೀಯ ಸಿಬ್ಬಂದಿ, ಮೂಲಸೌಲಭ್ಯಗಳ ಕೊರತೆ ನಡುವೆಯೂ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಆರೋಗ್ಯಸಚಿವ ಕೆ.ಆರ್.ರಮೇಶ್ ಕುಮಾರ್, ಸಮಿತಿ ವರಿದಿ ಆಧರಿಸಿ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶದಲ್ಲಿ 2007ರ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಸಮಿತಿ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸುವ ಅಗತ್ಯವಿಲ್ಲ. ಕಾಯ್ದೆಗೆ ತಿದ್ದುಪಡಿ ತರಲು ನ್ಯಾಯಮೂರ್ತಿ ವಿಕ್ರಂ ಜಿತ್‌ಸೇನ್ ಅವರೆ ಸೂಕ್ತ ವ್ಯಕ್ತಿ ಎಂಬ ಹಿನ್ನೆಲೆಯಲ್ಲಿ ಅವರನ್ನು ವಿನಂತಿಸಿಕೊಂಡಾಗ ಸಂತೋಷದಿಂದ ಒಪ್ಪಿದ್ದಾರೆ. ಅವರಿಗೆ ರಾಜ್ಯ ಸರಕಾರ ಮತ್ತು ವೈಯಕ್ತಿವಾಗಿ ಆಭಾರಿಯಾಗಿದ್ದೇವೆ ಎಂದು ಹೇಳಿದರು.

ಯಾವುದೇ ಒಬ್ಬ ರೋಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವ ವೇಳೆ ಆತನಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಮತ್ತು ಆತ ನೀಡುವ ಶುಲ್ಕದ ವಿಚಾರದಲ್ಲಿ ಪಾರದರ್ಶಕತೆ ಇರಬೇಕೆಂಬ ಉದ್ದೇಶದಿಂದ ಈ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News