×
Ad

ಬಡ್ತಿ ಮೀಸಲಾತಿ ತೀರ್ಪು: ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ಧರಣಿ

Update: 2017-04-28 22:22 IST

ಮಂಡ್ಯ, ಎ.28 : ಸರ್ವೋಚ್ಛ ನ್ಯಾಯಾಲಯ ನೀಡಿರುವ ಬಡ್ತಿ ಮೀಸಲಾತಿ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರ ಹಿತರಕ್ಷಣಾ ಒಕ್ಕೂಟ) ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಯಿತು.

ಸಿಲ್ವರ್ ಜ್ಯೂಬ್ಲಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು ಹಾಗೂ ವಿವಿಧ ಸಮಾಜದ ಮುಖಂಡರು, ಕಳೆದ ಫೆಬ್ರವರಿ 9 ರಂದು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಅನುಷ್ಠಾನಗೊಳಿಸಬೇಕು ಎಂದರು.

ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ಈಗಾಗಲೇ ನೀಡಿರುವ ಆದೇಶವನ್ನು ಉತ್ತರಪ್ರದೇಶ, ರಾಜಸ್ಥಾನ, ಉತ್ತರಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ರಾಜ್ಯ ಸರಕಾರವೂ ಆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ತಿಳಿಸಿದರು.

 1978ರಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಕಾನೂನಿನ ಪರಿಣಾಮದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವೇಗೋತ್ಕರ್ಷ ಬಡ್ತಿಗಳು ದೊರೆತಿದ್ದು, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗುತ್ತಿತ್ತು. ಇದನ್ನು ಮನಗಂಡು ಸುಪ್ರೀಂಕೋರ್ಟ್ ನ್ಯಾಯಯುತವಾದ ತೀರ್ಪು ನೀಡಿದೆ ಎಂದು ಹೇಳಿದರು.

ಈ ಸಂದಭರ್ದಲ್ಲಿ ಮಾತನಾಡಿದ ಅಹಿಂಸಾ ಸಂಘಟನೆಯ ರಾಜ್ಯಾಧ್ಯಕ್ಷ ಎಂ.ನಾಗರಾಜು, 1978ರಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ನೀತಿಯಿಂದ ದಲಿತರಿಗೆ ಆರು ಬಾರಿ ಬಡ್ತಿ  ಸೌಲಭ್ಯ ದೊರೆಯುತ್ತಿದ್ದರೆ, ಅಹಿಂಸಾ ನೌಕರರಿಗೆ ಕೇವಲ ಎರಡು ಬಡ್ತಿ ಸಿಗುವುದೂ ಕಷ್ಟವಾಗುತ್ತಿತ್ತು. ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಯಿತು ಎಂದು ವಿವರಿಸಿದರು.

ನಿರಂತರವಾಗಿ 25 ವರ್ಷ ನಡೆಸಿದ ಹೋರಾಟಕ್ಕೆ ಕೊನೆಗೂ ಸುಪ್ರೀಂಕೋರ್ಟ್ ನ್ಯಾಯ ಒದಗಿಸಿದೆ. ರಾಜ್ಯ ಸರಕಾರ ತಪ್ಪಾಗಿ ನೀಡಿದ ಮುಂಬಡ್ತಿಯನ್ನು ಹಿಂಪಡೆದು, ಅನ್ಯಾಯವಾಗಿದ್ದವರಿಗೆ ಮುಂಬಡ್ತಿ ಕೊಡಬೇಕೆಂದು ತೀರ್ಪು ನೀಡಿದೆ. ಆದರೆ, ರಾಜ್ಯ ಸರಕಾರ ಅನುಷ್ಠಾನಕ್ಕೆ ತರಲು ಮೀನಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದರು.

ತಮ್ಮ ಹೋರಾಟ ದಲಿತರ ವಿರುದ್ಧವಲ್ಲ, ಮುಂಬಡ್ತಿ ವಿಷಯದಲ್ಲಿ ಶೇ.82 ವರ್ಗದ ನೌಕರರಿಗೆ ಆಗಿರುವ ಅನ್ಯಾಯದ ವಿರುದ್ಧವೆಂದು ಸ್ಪಷ್ಟಪಡಿಸಿದರು, ಆರ್ಥಿಕವಾಗಿ ಮುಂದುವರಿದವರೂ ಮೀಸಲಾತಿ ಕಬಳಿಸುತ್ತಿರುವ ಪರಿಶಿಷ್ಟರ ವಿರುದ್ಧ, ಅದೇ ಸಮುದಾಯದ ಹಿಂದುಳಿದವರು ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಸಂಘಟನೆಯ ರಾಜ್ಯ ಮುಖಂಡ ಜಯಣ್ಣ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಯುತವಾಗಿದ್ದು, ರಾಜ್ಯ ಸರಕಾರ ಅನುಷ್ಠಾನಗೊಳಿಸಬೇಕು. ಆ ಮೂಲಕ ಶೇ.82 ವರ್ಗದ ನೌಕರರಿಗೆ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸುವುದು ಸರಿಯಲ್ಲ. ಸುಪ್ರೀಂಕೋರ್ಟ್ ಆದೇಶಕ್ಕೆ ಮಣಿದು ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದಂತೆ, ಈ ವಿಚಾರದಲ್ಲೂ ಸುಪ್ರೀಂಕೋರ್ಟ್‌ನ ತೀರ್ಪನ್ನು ರಾಜ್ಯ ಸರಕಾರ ಪಾಲಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಹಿಂದುಳಿದ ವರ್ಗದ ಮುಖಂಡ ಕೊತ್ತತ್ತಿ ಸಿದ್ದಪ್ಪ, ವಕೀಲ ಎಂ.ಗುರುಪ್ರಸಾದ್, ವಿಶ್ವನಾಥ್, ಅಲ್ಪಸಂಖ್ಯಾತರ ಮುಖಂಡ ತಜಮುಲ್ ತನ್ವಿರ್ ಪಾಷ, ಅಹಿಂಸಾ ಜಿಲ್ಲಾಧ್ಯಕ್ಷ ಜವರಾಯಿ, ಗೌರವಾಧ್ಯಕ್ಷ ನಾಗಣ್ಣ ಬಾಣಸವಾಡಿ, ಕೆ.ಎಂ.ನಾಗರಾಜು, ಶಿವಕುಮಾರ್, ಬಿ.ಎಂ.ಅಪ್ಪಾಜಪ್ಪ, ನಿಶಾಂತ್ ಕೀಲಾರ, ಇತರ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News