×
Ad

ಬೋರ್‌ವೆಲ್‌ಗಳಿಗೆ ಮುಚ್ಚಳ ಅಳವಡಿಸಲು ಡಿಸಿ ಸೂಚನೆ

Update: 2017-04-28 23:36 IST

ಮಡಿಕೇರಿ ಏ.27 : ಕೊಡಗು ಜಿಲ್ಲೆಯಲ್ಲಿ ವಿವಿಧ ಇಲಾಖಾ ವತಿಯಿಂದ ಮತ್ತು ಖಾಸಗಿಯವರು ಹಾಗೂ ಸರ್ಕಾರಿದವರು ಕೊಳವೆ ಬಾವಿಗಳನ್ನು ಕೊರೆದ ತಕ್ಷಣ ಸಂಬಂಧಿಸಿದ ಬೋರ್‌ವೆಲ್ ಗುತ್ತಿಗೆದಾರರು ಕಡ್ಡಾಯವಾಗಿ ಕೊಳವೆ ಬಾವಿಗೆ ಮುಚ್ಚಳವನ್ನು ಅಳವಡಿಸಲು ಕ್ರಮವಹಿಸಬೇಕು.

ಒಂದು ವೇಳೆ ಕೊಳವೆ ಬಾವಿ ವಿಫಲವಾದಲ್ಲಿ ಅಥವಾ ಕೊಳವೆ ಬಾವಿ ಕಾರ್ಯ ಪೂರ್ಣಗೊಳ್ಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ವಾಹನ ಮಾಲೀಕರು ಮತ್ತು ಭೂಮಾಲೀಕರು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದ್ದಾರೆ.

ವಿಫಲ ಕೊಳವೆ ಬಾವಿಗಳಿಗೆ ಮುಚ್ಚಳವನ್ನು ಅಳವಡಿಸುವುದು ಅಥವಾ ಕೊಳವೆ ಬಾವಿ ಕೊರೆದು ಉಂಟಾಗಿರುವ ರಂಧ್ರವನ್ನು ಕನಿಷ್ಠ ಭೂಮಟ್ಟದಿಂದ 02 ಅಡಿ ಎತ್ತರವಿರುವಂತೆ ಮಣ್ಣು, ಕಲ್ಲು ಇತರೆ ವಸ್ತುಗಳಿಂದ ಪೂರ್ಣವಾಗಿ ಮುಚ್ಚತಕ್ಕದ್ದು,ಈ ಸ್ಥಳಗಳಲ್ಲಿ ಮುಳ್ಳಿನಿಂದ ಕೂಡಿರುವ ಕಡ್ಡಿಗಳನ್ನು ಅಥವಾ ಗಿಡಗಳನ್ನು ಹಾಕಿ ಯಾರೂ ಈ ಪ್ರದೇಶಕ್ಕೆ ಹೋಗದಂತೆ ತಡೆಗಟ್ಟುವುದು.

ಒಂದುವೇಳೆ ಕೊಳವೆ ಬಾವಿ ರಿಪೇರಿ ಮಾಡುವ ಸಂದರ್ಭದಲ್ಲಿ ರಿಪೇರಿ ಕಾರ್ಯ ಮುಗಿಯುವವರೆಗೆ ಈ ಜಾಗದಲ್ಲಿದ್ದು, ರಿಪೇರಿ ಕಾರ್ಯ ಮುಗಿಸಿ ತಕ್ಷಣ ಸುರಕ್ಷಿತವಾಗಿ ಮುಚ್ಚಳವನ್ನು ಹಾಕುವುದು. ಮೇಲ್ಕಂಡಂತೆ ಕ್ರಮವಹಿಸುವ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಛಾಯಾ ಚಿತ್ರದೊಂದಿಗೆ ವರದಿ ನೀಡುವುದು.

ಈ ರೀತಿ ಕ್ರಮವಹಿಸದೇ ಇರುವುದು ಕಂಡುಬಂದಲ್ಲಿ ಅಥವಾ ಯಾವುದಾದರೂ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದ ಬೋರ್‌ವೆಲ್ ವಾಹನ ಮಾಲೀಕರು ಮತ್ತು ಭೂಮಾಲೀಕರನ್ನೇ ನೇರಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News