​ಸೋಹಾ ಅಲಿಖಾನ್ ಪ್ರಕರಣಕ್ಕೆ ಮರುಜೀವ

Update: 2017-04-30 03:43 GMT

ಚಂಡೀಗಡ, ಎ.30: ಬಾಲಿವುಡ್ ನಟಿ ಸೋಹಾ ಅಲಿಖಾನ್ ಹೆಸರಿನಲ್ಲಿದ್ದ ಬಂದೂಕಿನಿಂದ ಕೃಷ್ಣಮೃಗ ಕೊಲ್ಲಲಾಗಿದೆ ಎಂಬ ಪ್ರಕರಣ ಇದೀಗ ಮರುಹುಟ್ಟು ಪಡೆದಿದೆ. ಸೋಹಾ ಅಲಿಖಾನ್ ಅಪ್ರಾಪ್ತ ವಯಸ್ಸಿನವರಾಗಿದ್ದಾಗಲೇ ಅವರಿಗೆ ಶಸ್ತ್ರಾಸ್ತ್ರ ಲೈಸನ್ಸ್ ನೀಡಲಾಗಿದೆ ಎಂಬ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹರ್ಯಾಣ ಲೋಕಾಯುಕ್ತರು ಗುರುಗಾಂವ್ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಪ್ರಕರಣದ ವಿಚಾರಣೆಯನ್ನು  ದಿನಾಂಕ ಜುಲೈ 24ಕ್ಕೆ ನಿಗದಿಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ.ಅಗರ್‌ವಾಲ್ ಅವರು, ಆ ಮೊದಲು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಹರ್ಯಾಣ ಸ್ಕೌಟ್ಸ್ ಮತ್ತು ಗೈಡ್ಸ್ ಕಮಿಷನರ್ ಹಾಗೂ ಪ್ರಾಣಿಹಕ್ಕು ಹೋರಾಟಗಾರ ನರೇಶ್ ಕುಮಾರ್ ಕದಿಯನ್ ಎಂಬವರು ಸಲ್ಲಿಸಿದ ದೂರಿನ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ರಿಜಿಸ್ಟ್ರಾರ್ ಮಂಜೀತ್ ಸಿಂಗ್ ಶಿಫಾರಸ್ಸು ಮಾಡಿದ್ದರು.

1996ರ ನವೆಂಬರ್‌ನಲ್ಲಿ ಸೋಹಾ ಅಲಿಖಾನ್ ಅವರಿಗೆ ಶಸ್ತ್ರಾಸ್ತ್ರ ಲೈಸನ್ಸ್ ನೀಡುವಾಗ ಅವರು ಇನ್ನೂ ಅಪ್ರಾಪ್ತ ವಯಸ್ಕರಾಗಿದ್ದರು. ಅವರ ಹೆಸರಿನಲ್ಲಿ ನೋಂದಣಿಯಾಗಿದ್ದ ಶಸ್ತ್ರಾಸ್ತ್ರದಿಂದ ಕೃಷ್ಣಮೃಗ ಕೊಲ್ಲಲಾಗಿತ್ತು. ಈ ಹಿನ್ನೆಲೆಯಲ್ಲಿ ಲೈಸನ್ಸ್ ನೀಡುವಲ್ಲಿ ನಡೆದಿರಬಹುದಾದ ಅವ್ಯವಹಾರ ಬಗ್ಗೆ ತನಿಖೆ ನಡೆಸಬೇಕು ಎಂದು ಕದಿಯನ್ ಆಗ್ರಹಿಸಿದ್ದರು.

ಕಳೆದ ಮಾರ್ಚ್‌ನಲ್ಲಿ ನೀಡಿದ ದೂರಿನ ಪರಿಶೀಲನೆ ನಡೆಸಿದ ಲೋಕಾಯುಕ್ತ ರಿಜಿಸ್ಟ್ರಾರ್, "ಖಾನ್ ಅವರು ತಮ್ಮ ವಯಸ್ಸಿನ ದಾಖಲೆಯನ್ನು ಮುಚ್ಚಿಟ್ಟು ಲೈಸನ್ಸ್ ಪಡೆದಿದ್ದಾರೆ. ಇದು ಭಾರತೀಯ ದಂಡಸಂಹಿತೆಯ ಸೆಕ್ಷನ್ 420ರ ಶಿಕ್ಷಾರ್ಹ" ಎಂದು ವರದಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News