×
Ad

ಭಾರತವು ಪಲ್ಸ್ ಪೋಲಿಯೋ ಮುಕ್ತ ದೇಶ: ಡಾ.ಪೂರ್ಣಿಮಾ

Update: 2017-04-30 18:01 IST

ಚಿಕ್ಕಮಗಳೂರು, ಎ.30: ಹಲವು ವರ್ಷಗಳಿಂದ ಪೋಲಿಯೋ ರೋಗದ ಯಾವುದೇ ಪ್ರಕರಣ ನಮ್ಮ ದೇಶದಲ್ಲಿ ದಾಖಲಾಗಿಲ್ಲ. ಕಳೆದ ಸಾಲಿನಲ್ಲಿ ಭಾರತವು ಪಲ್ಸ್ ಪೋಲಿಯೋ ಮುಕ್ತ ದೇಶ ಎಂದು ಘೋಷಿಸಲ್ಪಟ್ಟಿದೆ ಎಂದು ರಾಜ್ಯ ನೂಡಲ್ ಅಧಿಕಾರಿ ಡಾ.ಪೂರ್ಣಿಮಾ ಹೇಳಿದರು.

ಅವರು ರವಿವಾರ ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ಜೆಸಿಐ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಯೋ 0 ರಿಂದ 14 ವರ್ಷದ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ತರುವ ರೋಗವಾಗಿದೆ, ಆದರೆ ನಮ್ಮ ನೆರೆಯ ಏಳು ದೇಶಗಳಲ್ಲಿ ಪೋಲಿಯೋ ಪ್ರಕರಣಗಳಿವೆ, ಅಲ್ಲಿರುವ ಪೋಲಿಯೋ ನಮ್ಮಲ್ಲಿಯೂ ಮರುಕಳಿಸುವ ಸಾಧ್ಯತೆಗಳಿವೆ, ಈ ಹಿನ್ನೆಲೆಯಲ್ಲಿ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದರೂ ಈ ಬಾರಿಯೂ ಹಾಕಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.

  ನಮ್ಮ ಸಮಾಜದಲ್ಲಿ ಪೋಲಿಯೋ ಒಂದು ಶಾಶ್ವತ ಅಂಗವಿಕತೆಯನ್ನು ತರುವ ಮಾರಕ ರೋಗವಾಗಿದೆ.ಪೋಲಿಯೋ ಹನಿ ಹಾಕಿಸುವುದರಿಂದ ಈ ರೋಗದ ವಿರುದ್ದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಅಗತ್ಯವಾಗಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸುವುದರಿಂದ ಈ ವೈರಾಣುವಿನಿಂದ ಮುಕ್ತಿ ಪಡೆಯಬಹುದು. ಪೋಲಿಯೋ ಲಸಿಕೆಯಿಂದ ಪೋಲಿಯೋ ವೈರಾಣು ನಾಶವಾಗುತ್ತದೆ ಎಂದು ನುಡಿದರು.

  ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನ ಮಾತನಾಡಿ, ನಿಮ್ಮ ಮಗುವನ್ನು ಆರು ಮಾರಕ ರೋಗಗಳಾದ ಬಾಲಕ್ಷಯ, ಪೋಲಿಯೋ, ಧನುರ್ವಾಯು, ಗಂಟಲುಮಾರಿ, ನಾಯಿಕಮ್ಮು, ಹೈಪಟೈಟೀಸ್ ಬಿ ಮತ್ತು ದಡಾರದಿಂದ ರಕ್ಷಿಸಲು ಚುಚ್ಚುಮದ್ದು ಕೊಡಿಸಬೇಕು. ಪ್ರತಿ ಮಗುವಿಗೆ ಒಂದು ಸಲ ಬಿಸಿಜಿ ಚುಚ್ಚುಮದ್ದು, 4 ಬಾರಿ ಪೋಲಿಯೋ ಲಸಿಕೆಯನ್ನು, 3 ಸಲ ಪೆಂಟಾವಲೆಂಟ್ ಚುಚ್ಚುಮದ್ದು, 1 ಬಾರಿ ದಡಾರ ಚುಚ್ಚುಮದ್ದು ನೀಡುವುದು ಅಗತ್ಯ ಎಂದು ಹೇಳಿದರು.

  ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಮಗುವಿಗೆ ಪೋಲಿಯೋ ಹಾಕುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
  ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ನಾಗೇಂದ್ರ, ಆರ್.ಎಂ.ಓ ಡಾ.ಕಲ್ಪನಾ, ಜಿಲ್ಲಾ ಆರ್‌ವಿಹೆಚ್ ಅಧಿಕಾರಿ ಡಾ.ಕಿರಣ್, ಡಾ. ಆಶ್ವಥ ಬಾಬು, ಡಾ.ಲೋಕೇಶ್, ರೋಟರಿ ಕ್ಲಬ್ ಅಧ್ಯಕ್ಷ ಎನ್.ಎಸ್. ಸುಧೀರ್, ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಂದ್ರ, ಜಿಲ್ಲಾ ಆಸ್ಪತ್ರೆ ಆಧೀಕ್ಷ ಪದ್ಮಿನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News