ಹೊರ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಬೃಹತ್ ಸಮಾವೇಶ

Update: 2017-04-30 13:40 GMT

ಮಡಿಕೇರಿ,ಎ.30 :ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ 1 ರಂದು ಹೊರ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಬೃಹತ್ ಸಮಾವೇಶ ಮಂಡ್ಯದಲ್ಲಿ ರಾಜ್ಯ ಮಟ್ಟದ ಕಾರ್ಮಿಕರ ರ್ಯಾಲಿ ಮತ್ತು ಬೃಹತ್ ಸಮಾವೇಶ ಹಮ್ಮಿಕೊಂಡಿದೆ ಎಂದು ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಬಾಬು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆಗನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನ ಕಸಿದು ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕೂಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ವಿವಿಧ ಇಲಾಖೆಗಳಲ್ಲಿ 3.75 ಲಕ್ಷ ಹುದ್ದೆಗಳನ್ನು ತುಂಬದೆ ಖಾಲಿ ಬಿಡಲಾಗಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಒಬ್ಬ ಖಾಯಂ ಕಾರ್ಮಿಕನಿಗೆ ನೀಡುವ ವೇತನದಲ್ಲಿ ನಾಲ್ವರು ಹೊರಗುತ್ತಿಗೆ ನೌಕರರನ್ನು ನಿಭಾಯಿಸಲಾಗುತ್ತಿದೆ. ಸರ್ಕಾರಿ ಉದ್ದಿಮೆಗಳನ್ನು ಮುಚ್ಚಿ ಖಾಸಗಿಯವರ ವಶಕ್ಕೆ ಒಪ್ಪಿಸಲಾಗುತ್ತಿದೆ.

ಇದರ ಪರಿಣಾಮ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಹಾಗೂ ಮೀಸಲಾತಿ ನಿರಾಕರಣೆಯಾಗುತ್ತಿದೆ ಎಂದು ಸುರೇಶ್ ಬಾಬು ಆರೋಪಿಸಿದ್ದಾರೆ.

ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಹೊರ ಗುತ್ತಿಗೆ ಪದ್ದತಿಯನ್ನು ಕೈಬಿಟ್ಟು ವಿಶೇಷ ನೇಮಕಾತಿ ನಿಯಮಗಳ ಮೂಲಕ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸಿ ಮೇ 1 ರಂದು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

 ನಗರಸಭೆ, ಪುರಸಭೆ, ಜಲಮಂಡಲಿ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಇಲಾಖೆಯಲ್ಲಿನ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೋಮವಾರ ಮಂಡ್ಯದ ಕಾಳಿಕಾಂಭ ದೇವಾಲಯದ ಆವರಣದಿಂದ ಕಾರ್ಮಿಕರ ರ್ಯಾಲಿ ಆರಂಭವಾಗಲಿದೆ. ಮಧ್ಯಾಹ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಜರುಗುವ ಕಾರ್ಮಿಕ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ನಾಯಕ ಹಾಗೂ ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಮೈಸೂರಿನ ಮಾಜಿ ಮೇಯರ್ ಆದ ಎನ್.ನಾರಯಣ್, ಎಐಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೇಷಾದ್ರಿ, ಉಪನ್ಯಾಸಕಿ ಶ್ರೀಲತಾ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಹೊರ ಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ.ಬಿ.ನಾಗಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News