ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನಿತ ಜಿಲ್ಲೆಯಾಗಿ ಕೊಡಗು : ಪೊಲೀಸ್ ಇಲಾಖೆ ಸಂಕಲ್ಪ

Update: 2017-04-30 13:54 GMT

ಕೊಡಗು ಎ.30 : ಕೊಡಗನ್ನು ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಅತ್ಯುತ್ತಮ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ, ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.

ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವ ವಲಯದಲ್ಲಿ ಕೋಟ್ಪಾ-2003 (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲಹೆ, ಸೂಚನೆ ನೀಡಲಾಯಿತು.

 ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಕೋಟ್ಪಾ ಕಾಯ್ದೆಯ ಅನುಷ್ಠಾನದ ನೋಡಲ್ ಅಧಿಕಾರಿಯೂ ಆದ ಶ್ರೀ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ತಂಬಾಕು ಚಟಕ್ಕೆ ದಾಸರಾಗುತ್ತಿದ್ದಾರೆ, ಅದರಲ್ಲೂ ಶಾಲಾ ಕಾಲೇಜುಗಳ ಮುಂದೆ ಅಕ್ರಮ ಮಾರಾಟ ಹೆಚಾಗ್ಚುತ್ತಿದ್ದು, ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ.

ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪೊಲೀಸ್ ಪ್ರಕರಣಗಳ ತಿಂಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದರಂತೆ ಬಹುತೇಕ ಜಿಲ್ಲೆಗಳು ಮತ್ತು ವಲಯಗಳಲ್ಲಿ ಈ ಸಂಬಂಧ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆೆ. ಕೊಡಗು ಜಿಲ್ಲೆಯನ್ನು ಸದ್ಯದಲ್ಲೇ ಅತ್ಯುತ್ತಮ ಕೋಟ್ಪಾ ಕಾಯ್ದೆ ಅನುಷ್ಠಾನಿತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆಯ ಸಮರ್ಪಕ ಜಾರಿಗೆ ಶ್ರಮವಹಿಸಬೇಕೆಂದು ಎಸ್‌ಪಿ ರಾಜೇಂದ್ರಪ್ರಸಾದ್ ಕರೆ ನೀಡಿದರು.

 ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪೊಲೀಸರು ತಮ್ಮ ಸಾಮಾಜಿಕ ಬದ್ಧತೆ ತೋರಬೇಕೆಂದು ತಿಳಿಸಿದರು. ಕೋಟ್ಪಾ ಕಾಯ್ದೆಯಲ್ಲಿನ ಪ್ರಮುಖ ನಿಯಮಗಳ ಮಹತ್ವ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ. ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಕಾನೂನಿನನ್ವಯ ಸೂಚನಾ ಫಲಕಗಳನ್ನು ಪ್ರದರ್ಶಿಸಬೇಕೆಂದು ಹಾಗೂ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕೆಂದು ಸೂಚನೆ ನೀಡಿದರು.

 ಜಿಲ್ಲಾ ಆರೋಗ್ಯಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ಮಾತನಾಡಿ, ಮಾನ್ಯ ಅಪರ ಜಿಲ್ಲಾಧಿಕಾರಿಗಳ ಸೂಚನಾಯನ್ವಯ ಪೊಲೀಸ್ ಹಾಗೂ ಆರೋಗ್ಯ ಇಲಾಖೆಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಮೇ 8ರಿಂದ ನಿಯಮಿತವಾಗಿ ಜಿಲ್ಲೆಯಾಧ್ಯಂತ ವಿಶೇಷ ಕಾರ್ಯಾಚರಣೆಯನ್ನು ನಡೆಸಲು ಉದ್ದೇಶಿಸಿದ್ದು, ಈ ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

  ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಇನ್‌ಸ್ಟಿಟ್ಯೂಟ್ ಆಪ್ ಪಬ್ಲಿಕ್ ಹೆಲ್ತ್‌ನ ಡಾ. ಜಾನ್ ಕೆನಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಡಾ. ಹನುಮಂತರಾಯಪ್ಪರವರು ಕೋಟ್ಪಾ ಕಾಯ್ದೆ ಹಾಗೂ ತಂಬಾಕಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಯಾರಿಸಲಾದ ವಿಶೇಷ ದೃಶ್ಯ-ಶ್ರಾವ್ಯ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಿದರು.

ಜಿಲ್ಲಾ ಭಾರತೀಯ ವೈದ್ಯಕೀಯ ಪರಿಷತ್, ಕೊಡಗು ಘಟಕದ ಅಧ್ಯಕ್ಷರಾದ ಡಾ. ಮೋಹನ್ ಅಪ್ಪಾಜಿರವರು ತಂಬಾಕಿನ ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ತಂಬಾಕು ಕೋಟ್ಯಾಂತರ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಮಾರಕ ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. 

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತ್ತೀಚಿನ ಸಂಶೋಧನೆಗಳ ಪ್ರಕಾರ ದೇಶದಲ್ಲಿ ಪ್ರತಿ ಎಂಟು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಮಾಡುವವರು ಕೊನೆ ಉಸಿರೆಳೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶೇ. 40 ರಷ್ಟು ಪುರುಷರು ಮತ್ತು ಶೇ.16 ರಷ್ಟು ಮಹಿಳೆಯರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. ಇದರ ಪರಿಣಾಮ ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶ ತೊಂದರೆ ಸೇರಿದಂತೆ ಮತ್ತಿತರೆ ಮಾರಣಾಂತಿಕ ರೋಗಗಳಿಗೆ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ. ಇದರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಪ್ ಪಬ್ಲಿಕ್ ಹೆಲ್ತ್ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News