ನನ್ನ ವಿರುದ್ದ ಶಿಸ್ತು ಕ್ರಮದ ಪ್ರಶ್ನೆಯೇ ಉದ್ಬವಿಸದು-ಕೆ.ಎಸ್.ಈಶ್ವರಪ್ಪ

Update: 2017-04-30 14:15 GMT

ತುಮಕೂರು.ಎ.30: ನಾನು ಹಲವು ವರ್ಷಗಳಿಂದಲೂ ಬಿ.ಜೆ.ಪಿ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ ಮುರುಳಿಧರ್‌ರಾವ್ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷದ ಹಿರಿಯ ಮುಖಂಡರಾದ ಭಾನುಪ್ರಕಾಶ್ ವಿರುದ್ಧ ಮುರುಳಿಧರರಾವ್ ಕ್ರಮ ಕೈಗೊಂಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ.

ಪಕ್ಷದ ಸಂಘಟನೆ ಕಟ್ಟುವಲ್ಲಿ ಈಶ್ವರಪ್ಪ ಏನೆಂದು ಎಲ್ಲರಿಗೂ ಗೊತ್ತಿದೆ.ನಾನು ಮೂರು ಬಾರಿ ರಾಜ್ಯಾಧ್ಯಕ್ಷನಾಗಿ ಪಕ್ಷಕ್ಕೆ ದುಡಿದಿದ್ದೇನೆ. ನನ್ನ ವಿರುದ್ಧ ಯಾರು ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದರು.

ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವುದೂ ಕೂಡ ಯಾರೋ ಹುಟ್ಟು ಹಾಕುತ್ತಿದ್ದಾರೆ. ಯಡಿಯೂರಪ್ಪ ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ.ಆದರೆ ಪಕ್ಷ ಸಂಘಟನೆ ವಿಚಾರದಲ್ಲಿ ಈಶ್ವರಪ್ಪ ಪಾತ್ರ ಏನೆಂದು ಕೇಂದ್ರ ನಾಯಕರಿಗೆ ಗೊತ್ತು ಎಂದರು.

ಯಡಿಯೂರಪ್ಪ ಪಕ್ಷ ತೊರೆದ ಸಂದರ್ಭದಲ್ಲಿ ನಾನು ಸಚಿವ ಸ್ಥಾನ ತ್ಯಜಿಸಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಹಗಲು ರಾತ್ರಿ ಎನ್ನದೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದೇನೆ.ಪಕ್ಷಕ್ಕೆ ಆಗುತ್ತಿದ್ದ ನಷ್ಟವನ್ನು ತಡೆದಿದ್ದೇನೆ.ಅಂತಹ ಸಂಕಷ್ಟದಲ್ಲಿ ಕೆಲಸ ಮಾಡಿದ ನನ್ನ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಬವಿಸದು ಎಂದು ಈಶ್ವರಪ್ಪ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News