ತೆಂಗಿನ ಮರ ಅಪ್ಪಿದ ವಾಟಾಳ್ ನಾಗರಾಜ್

Update: 2017-04-30 16:04 GMT

ಚಾಮರಾಜನಗರ,ಎ.30: ಚಾಮರಾಜನಗರ ಸೇರಿದಂತೆ ಜಿಲ್ಲೆಯೂ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಬಂದು,ಕೆರೆ ಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.ಮೇವು ಸಹ ಇಲ್ಲ,ಸಾವಿರಾರು ತೆಂಗಿನಮರಗಳು ಒಣಗಿ ನಿಂತ್ತಿವೆ.ಇದನ್ನು ಅರಿತ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಸಂಪೂರ್ಣವಾಗಿ ಒಣಗಿ ನಿಂತ್ತಿರುವ ತೆಂಗಿನ ಮರಗಳನ್ನು  ವೀಕ್ಷಿಸಿದರು.

ಭಾನುವಾರ ತಾಲ್ಲೂಕಿನ ಅಮಚವಾಡಿ,ಹೊನ್ನಳ್ಳಿ ಸೇರಿದಂತೆ ಅನೇಕ ಕಡೆ ಜಮೀನಿನಲ್ಲಿ ನೀರಿಲ್ಲದೇ ಒಣಗಿ ನಿಂತ್ತಿರುವ ಸಾವಿರಾರು ತೆಂಗಿನ ಮರಗಳ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್,ಆರು ವರ್ಷ ನನ್ನನ್ನು ಸಾಕು,ನೂರು ವರ್ಷ ನಿನ್ನನ್ನು ಸಾಕುತ್ತೇನೆ ಎಂಬ ಅದ್ಬುತವಾದ ಗಾದೆಯನ್ನು ಇಂದು ಬರಗಾಲ ಹುಸಿ ಮಾಡುತ್ತಿದೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ತೆಂಗಿನ ಮರಗಳು ಒಣಗಿ ನಿಂತ್ತಿವೆ.ಇಷ್ಟೇಲ್ಲವಾದರೂ ಸಹ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿಗಳನ್ನು ಅವಲೋಕಿಸದೆ,ಅವರ ನೋವಿಗೆ ಸ್ಪಂಧಿಸದೆ ಇರುವುದು ನೋವಿನ ಸಂಗತಿ.

ಇನ್ನು ಮೂವತ್ತು-ನಲವತ್ತು ವರ್ಷಗಳ ಕಾಲ ಫಸಲು ಕೊಡುವ ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ.ಇದರಿಂದ ತೆಂಗಿನ ಬೆಳೆಗಾರರ ಸ್ಥಿತಿ ಇಂದು ಚಿಂತಾಜನಕವಾಗಿದೆ ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತ ಪಡಿಸಿದರು.

ತೆಂಗು ಅಭಿವೃದ್ಧಿ ಮಂಡಳಿ ಒಂದು ನಾಟಕದ ಕಂಪನಿಯಾಗಿದೆ.ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸ್ಪಂಧಿಸದೆ ಸಂಪೂರ್ಣ ವಿಫಲವಾಗಿದೆ.ಕೆರೆ-ಕಟ್ಟೆಗಳು ಬರಿದಾಗಿವೆ.ರೈತರು ಫಸಲು ಸಂಪೂರ್ಣ ನಾಶವಾಗಿದೆ.ರೈತರಿಗೆ ಸಹಾಯಧನ ನೀಡುವುದರಲ್ಲಿ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ.ಬೆಳೆಗಾರರಿಗೆ ಪರಿಹಾರ ಕೂಡ ನೀಡುತ್ತಿಲ್ಲ.ಕೂಡಲೆ ಸರ್ಕಾರ ಗಾಂಭೀರವಾಗಿ ಪರಿಸ್ಥಿತಿಯನ್ನು ಪರಿಗಣಿಸಿ,ರೈತರ ತೆಂಗಿನ ತೋಟಗಳಿಗೆ ಅಧಿಕಾರಿಗಳ ತಂಡ ಕಳುಹಿಸಿ ಸೂಕ್ತ ಪರಿಹಾರ ಕೊಡಬೇಕಾಗಿ ಒತ್ತಾಯಿಸಿದರು.

 ಕೊತ್ತಲವಾಡಿ,ಎಣ್ಣೆಹೊಳೆ,ಅರಕಲವಾಡಿ,ಬಂಡಿಗೆರೆ,ದೊಡ್ಡಕೆರೆ,ಕೋಡಿಮೋಳೆ,ದೊಡ್ಡರಾಯಪೇಟೆ ಕೆರೆ ಹಾಗೂ ಚಿಕ್ಕಹೊಳೆ ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲಾ ಪ್ರಮುಖ ಕೆರೆಗಳಿಗೆ ನದಿ ಪಾತ್ರದಿಂದ ನೀರು ತುಂಬಿಸಬೇಕು,ರೈತರಿಗೆ ಬೆಳೆ ಪರಿಹಾರ ಸರಿಯಾದ ರೀತಿಯಲ್ಲಿ ರೈತರಿಗೆ ನೀಡಬೇಕು.

ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ನೀರು ಒದಗಿಸಬೇಕು.ಮಳೆಯಿಲ್ಲದೇ ಸಂಪೂರ್ಣ ನಾಶವಾಗಿರುವ ತೆಂಗಿನಮರಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮುಂದಿನ ತಿಂಗಳು ಮೇ 3 ರಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News