ವಿಧಾನಪರಿಷತ್‌ಗೆ ನಾಮನಿರ್ದೇಶನ; ಹೆಸರು ಕೈ ಬಿಟ್ಟರೆ ಹೋರಾಟ ನಿಶ್ಚಿತ : ಕೆ.ಪಿ.ನಂಜುಂಡಿ

Update: 2017-04-30 16:45 GMT

ಬೆಂಗಳೂರು, ಎ.30: ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವ ಸಂಬಂಧ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರಕಾರ ಸಿದ್ಧಪಡಿಸುತ್ತಿರುವ ಅರ್ಹರ ಪಟ್ಟಿಯಿಂದ ನನ್ನ ಹೆಸರನ್ನು ಕೈ ಬಿಟ್ಟರೆ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದ್ದಾರೆ.

 ರವಿವಾರ ನಗರದ ಆನಂದ್‌ರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಟ್ಟಿಯಿಂದ ನನ್ನ ಹೆಸರನ್ನು ಅಧಿಕೃತವಾಗಿ ಕೈ ಬಿಟ್ಟಿರುವ ಕುರಿತು ಮಾಹಿತಿಯಿಲ್ಲ. ಒಂದು ವೇಳೆ ನನ್ನ ಹೆಸರನ್ನು ಕೈ ಬಿಟ್ಟರೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ನಮಗೆ ವಿಶ್ವಕರ್ಮ ಪ್ರಾಧಿಕಾರ ಮಾಡಿಕೊಟ್ಟಿದೆ. ಆದರೆ ರಾಜಕೀಯವಾಗಿ ನಮ್ಮನ್ನು ದೂರವಿಟ್ಟಿದೆ. ಮೇ 28ರಂದು ವಿಶ್ವಕರ್ಮ ಯುವಕರ ಜಾಗೃತಿ ಸಮಾವೇಶವನ್ನು ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸನ್ಮಾನಿಸಬೇಕು ಅಂದುಕೊಂಡಿದ್ದೆ. ಆದರೆ, ಈಗಿನ ವಿದ್ಯಾಮಾನಗಳನ್ನು ನೋಡಿ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ ಎಂದು ಅವರು ಹೇಳಿದರು.

ನನ್ನ ಮಾತು ನಿಂತು ಹೋಗಿದೆ. ಈ ಸಮಾಜಕ್ಕೆ ಏನಾದರೂ ಮಾಡಬೇಕು ಅಂದುಕೊಂಡಿದ್ದೆ. ಆದರೆ, ಈಗ ಅದು ನಿಂತ ನೀರಾಗಿದೆ. ನಮ್ಮ ಸಮುದಾಯದವರಿಗೆ ಎಲ್ಲ ಸವಲತ್ತುಗಳು ಸಿಗಬೇಕು ಅಂದರೆ ನಮಗೆ ಒಂದು ಪಕ್ಷ ಬೇಕಿತ್ತು. ಅದಕ್ಕಾಗಿ ನಾನು ಕಳೆದ 16 ವರ್ಷಗಳಿಂದ ನಮ್ಮ ಸಮುದಾಯದ ಸ್ವಾಮಿಗಳು ಸೇರಿದಂತೆ ಎಲ್ಲರನ್ನು ಕಾಂಗ್ರೆಸ್ ಪಕ್ಷಕ್ಕೆ ದುಡಿಯುವಂತೆ ಹೇಳಿದ್ದೆ ಎಂದು ನಂಜುಂಡಿ ತಿಳಿಸಿದರು.

ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ್ದೆ. ನನಗೆ ರಾಜಕೀಯ ಮಾಡಿ ಅಭ್ಯಾಸವಿಲ್ಲ. ನನಗೆ ಸಿದ್ದರಾಮಯ್ಯನವರ ಮೇಲೆ ಆಪಾರ ಗೌರವವಿದೆ. ಸಿದ್ಧರಾಮಯ್ಯ ಎಷ್ಟೋ ಬಾರಿ ಬೇರೆಯವರ ಬಳಿ ನನ್ನನ್ನು ಮಾದರಿಯಾಗಿ ತೋರಿಸಿದ್ದಾರೆ. ಆದರೆ ಈಗ ಯಾವ ಕಾರಣಕ್ಕಾಗಿ ಸಿದ್ದರಾಮಯ್ಯ ಹೀಗೆ ನಡೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಅವರು ಹೇಳಿದರು.

ನಾನು ಇಂತಹ ಅಭ್ಯರ್ಥಿಗಳಿಗೆ ಮತ ನೀಡಿ ಎಂದರೆ ಎಲ್ಲರೂ ಅದೇ ಅಭ್ಯರ್ಥಿಗಳ ಪರವಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆ ರೀತಿಯಲ್ಲಿ ನಾನು ನಮ್ಮ ಸಮುದಾಯವನ್ನು ಸಂಘಟಿಸಿದ್ದೇನೆ. ನಾನು ಸಮಾಜಕ್ಕೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಏನೂ ಕೊಡಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ಕಾಡುತ್ತಿದ್ದೆ ಎಂದು ನಂಜುಂಡಿ ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಬೇಡ ಎಂದು ಸಮುದಾಯದ ಸ್ವಾಮಿಗಳು ಈ ಹಿಂದೆಯೆ ಹೇಳಿದ್ದರು. ಆದರೆ, ಅವರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಬೆಂಬಲ ನೀಡೋಣ ಎಂದಿದ್ದೆ. ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯ ಪರವಾಗಿ ಎಲ್ಲ ಹಂತಗಳಲ್ಲೂ ನಿಂತಿದ್ದೇನೆ. ಆದರೂ, ಈ ರೀತಿಯ ಅನ್ಯಾಯ ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ಎಲ್ಲವನ್ನು ಕಾಲ ನಿರ್ಧರಿಸುತ್ತದೆ ಎಂದು ಅವರು ನೊಂದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News