ಮತಕ್ಕಾಗಿ ಬಿಜೆಪಿಯಿಂದ ಅಂಬೇಡ್ಕರ್ ನಾಮ ಜಪ: ಡಾ.ಜಿ.ಪರಮೇಶ್ವರ್

Update: 2017-04-30 16:57 GMT

ಬೆಂಗಳೂರು, ಎ.30: ತಮ್ಮ ಪಕ್ಷದ ಕಚೇರಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಹಿಂದೇಟು ಹಾಕಿದ್ದಂತಹ ಬಿಜೆಪಿಯವರು, ಈಗ ದಲಿತರ ಮತಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಅಂಬೇಡ್ಕರ್ ಹೆಸರಿನ ಜಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದಾರೆ.

ರವಿವಾರ ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್, ಮುಂದಿನ ಪೀಳಿಗೆಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ಶ್ರಮಿಸಿದ್ದರು. ಸಾವಿರಾರು ವರ್ಷ ಕಳೆದರೂ ಅಂಬೇಡ್ಕರ್ ಚಿಂತನೆಗಳು ಪ್ರಸ್ತುತವಾಗಿರುತ್ತವೆ ಎಂದು ಪರಮೇಶ್ವರ್ ತಿಳಿಸಿದರು.

 ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ ರಾಜ್ಯದ ಅಭಿವೃದ್ಧಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರವು ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಸರಕಾರವನ್ನು ನೀಡಿದ್ದು, 2018ರಲ್ಲಿ ನಡೆಯಲಿರುವ ಚುನಾವಣೆಯಲ್ಲೂ ಜನರ ಆಶೀರ್ವಾದ ಪಡೆದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿಯ ‘ಮಿಷನ್ 150’ ವಿಫಲವಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜನ ನಮ್ಮ ಪಕ್ಷದ ಪರವಾಗಿ, ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತಚಲಾವಣೆ ಮಾಡುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯ ಸರಕಾರವು ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚು ಅನುದಾನವನ್ನು ನೀಡಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿದ್ದ 110 ಹಳ್ಳಿಗಳ ಪೈಕಿ ಹೆಚ್ಚಿನ ಹಳ್ಳಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ಕ್ಷೇತ್ರಕ್ಕೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿಪರವಾದ ಆಡಳಿತ ನೀಡಿದೆ. 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಾರಥ್ಯದಲ್ಲಿ ಎದುರಿಸಲಿದ್ದು, ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷಗಾದಿಯ ಆಕಾಂಕ್ಷಿಯೂ ಅಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರೇ ಮುಂದುವರೆಯಲಿದ್ದಾರೆ ಎಂದು ಸೋಮಶೇಖರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಬಿ.ಎಸ್.ಸುರೇಶ್, ರಿಝ್ವನ್ ಅರ್ಶದ್, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಬಿಬಿಎಂಪಿ ಸದಸ್ಯ ನಿತೀಶ್ ಪುರುಷೋತ್ತಮ್ ಸೇರಿದಂತೆ ಪಾಲಿಕೆಯ ಸದಸ್ಯರು, ನೂರಾು ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News