ಬರದ ನಡುವೆಯೂ ರಾಜ್ಯದ ಜಿಲ್ಲಾ ಪಂಚಾಯ್ತಿತಿ ಅಧ್ಯಕ್ಷರ ’ಕಾರು’ಬಾರು!

Update: 2017-04-30 17:03 GMT

ಶಿವಮೊಗ್ಗ, ಎ.30: ಒಂದೆಡೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಬರಗಾಲ ಸ್ಥಿತಿ ಆವರಿಸಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ. ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಬರ ಪರಿಹಾರ ಕಾಮಗಾರಿಗಳಿಗೆ ಒತ್ತು ನೀಡಬೇಕಾದ ಇಂತಹ ಸಂದರ್ಭದಲ್ಲಿಯೇ ರಾಜ್ಯದ ಹಲವು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳಿಗೆ ಲಕ್ಷಾಂತರ ರೂ. ಮೌಲ್ಯದ ಇನ್ನೋವಾ ಕಾರುಗಳ ಭಾಗ್ಯ ಲಭಿಸಿದೆ.

ಹೌದು. ಕಳೆದ ಒಂದೆರೆಡು ವಾರಗಳ ಹಿಂದೆ ಹೊಸ ಕಾರುಗಳ ಖರೀದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಅಗತ್ಯ ಅನುದಾನ ಕೂಡ ಬಿಡುಗಡೆ ಮಾಡಿದೆ, ಅದರಂತೆ ಹಲವು ಜಿಲ್ಲೆಗಳ ಜಿ.ಪಂ. ಅಧ್ಯಕ್ಷರು ಸರಿಸುಮಾರು 15 ಲಕ್ಷ ರೂ. ಮೇಲ್ಮಟ್ಟ ಇನ್ನೋವಾ ಕಾರುಗಳನ್ನು ಖರೀದಿಸಿ, ಅಧಿಕೃತವಾಗಿ ಓಡಾಡಲಾರಂಭಿಸಿದ್ದಾರೆ. ಅಧ್ಯಕ್ಷರುಗಳ ಹೊಸ ’ಕಾರು’ಬಾರು ಜೋರಾಗಿದೆ.


ಕೆಲ ಜಿಲ್ಲೆಗಳ ಅಧ್ಯಕ್ಷರು ಬಳಸುತ್ತಿದ್ದ ಇನ್ನೋವಾ ಕಾರು ಸುಮಾರು ಒಂದು ವರ್ಷದ ಹಿಂದಷ್ಟೆ ಖರೀದಿಸಲಾಗಿತ್ತು. ಸಂಚಾರಕ್ಕೆ ಯೋಗ್ಯ ಸ್ಥಿತಿಯಲ್ಲಿಯೇ ಇವೆ. ಇವರಿಗೂ ಕೂಡ ಹೊಸ ಕಾರು ಮಂಜೂರು ಮಾಡಲಾಗಿದೆ. ಅವರು ಬಳಕೆ ಮಾಡುತ್ತಿದ್ದ ಹಳೆಯ ಕಾರುಗಳನ್ನು ಉಪಾಧ್ಯಕ್ಷರಿಗೆ ಅಥವಾ ಹಿರಿಯ ಅಧಿಕಾರಿಗಳ ಬಳಕೆಗೆ ಮೀಸಲಿರಿಸಲಾಗಿದೆ.

ಶಿವಮೊಗ್ಗ ಜಿ.ಪಂ. ಅಧ್ಯಕ್ಷರು ಬಳಸುತ್ತಿದ್ದ ಇನ್ನೋವಾ ಕಾರನ್ನು ಖರೀದಿಸಿ ಒಂದು ವರ್ಷ ಕೂಡವಾಗಿಲ್ಲವಾಗಿದೆ. ಈ ನಡುವೆ ಅವರಿಗೂ ಕೂಡ ಹೊಸ ಕಾರು ಮಂಜೂರಾಗಿದ್ದು, ಹಳೆಯ ಕಾರನ್ನು ಉಪಾಧ್ಯಕ್ಷರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಜಿ.ಪಂ. ಆಡಳಿತ ಮೂಲಗಳು ಮಾಹಿತಿ ನೀಡುತ್ತೇವೆ.

ಮೇಲ್ದರ್ಜೆಗೆ: ಜಿ.ಪಂ. ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕಲ್ಪಿಸಲಾಗಿದೆ. ಈ ಸ್ಥಾನಮಾನಕ್ಕೆ ಅನುಗುಣವಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೇತನ, ಭತ್ಯೆ ಹೆಚ್ಚಿಸಲಾಗಿದೆ. ಹೊಸ ಕಾರು ಖರೀದಿಗೂ ಅವಕಾಶವಿದ್ದು, ನಿಯಾಮಾನುಸಾರವೇ ಕಾರು ಖರೀದಿಸಲಾಗಿದೆ. ಇದಕ್ಕಾಗಿಯೇ ಸರ್ಕಾರದಿಂದ ಹಣ ಕೂಡ ಮಂಜೂರಾಗಿದೆ. ಈ ಹಣ ಬಳಕೆ ಮಾಡದಿದ್ದರೆ ವಾಪಾಸ್ ಹೋಗಲಿದೆ. ಇತರೆ ಕಾರ್ಯಗಳಿಗೂ ಈ ಹಣ ಬಳಕೆ ಮಾಡಲು ಬರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News