ಭೇಟಿಗೆ ಸಿಗದ ಮುರುಳಿಧರರಾವ್ : ಬೆಂಗಳೂರಿನಿಂದ ಹಿಂದಿರುಗಿದ ಕೆ.ಎಸ್.ಈಶ್ವರಪ್ಪ!

Update: 2017-04-30 17:27 GMT

ಶಿವಮೊಗ್ಗ, ಎ. 30: ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತದ ಹಿನ್ನಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಕೇಂದ್ರ ಮುಖಂಡ ಮುರುಳಿಧರರಾವ್‌ರವರು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರ ಕೈಗೆ ಸಿಗುತ್ತಿಲ್ಲ! ಎಂದು ಬಿಜೆಪಿಯ ಉನ್ನತ ಮೂಲಗಳು ಇದನ್ನು ಖಚಿತಪಡಿಸಿವೆ.

ಮುರುಳೀಧರರಾವ್‌ರವರನ್ನು ಭೇಟಿಯಾಗುವ ಉದ್ದೇಶದಿಂದಲೆ ಕೆ.ಎಸ್.ಈಶ್ವರಪ್ಪರವರು ಬೆಂಗಳೂರಿಗೆ ತೆರಳಿದ್ದರು. ಆದರೆ ಅವರು ಭೇಟಿಗೆ ಸಮಯ ನೀಡದ ಕಾರಣದಿಂದ ಕೆ.ಎಸ್.ಈಶ್ವರಪ್ಪರವರು ಭಾನುವಾರ ಶಿವಮೊಗ್ಗಕ್ಕೆ ಹಿಂದಿರುಗಿದ್ದಾರೆ.

ಮುರುಳೀಧರರಾವ್‌ರವರು ಮೊದಲಿನಿಂದಲೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ವಿಷಯದಲ್ಲಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಪರವಾಗಿ ನಿಂತುಕೊಂಡಿದ್ದರು.

ಹಲವು ಬಾರಿ ಕೆ.ಎಸ್.ಈಶ್ವರಪ್ಪರವರಿಗೆ ಬ್ರಿಗೇಡ್ ಚಟುವಟಿಕೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದರು. ಆದರೆ ಕೆ.ಎಸ್.ಈಶ್ವರಪ್ಪ. ಮಾತ್ರ ಮುರುಳೀಧರರಾವ್‌ರವರ ಮಾತಿಗೆ ಮನ್ನಣೆ ನೀಡಿರಲಿಲ್ಲ. ಮತ್ತೊಂದೆಡೆ ರಾಷ್ಟ್ರಾಧ್ಯಕ್ಷ ಅಮಿತ್ ಷಾರವರು ಬ್ರಿಗೇಡ್‌ಗೆ ಬೆಂಬಲ ಸೂಚಿಸಿದ್ದರು. ಬ್ರಿಗೇಡ್ ಮೂಲಕ ರಾಜಕೀಯೇತರ ಚಟುವಟಿಕೆ ನಡೆಸಲು ಅಡ್ಡಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರಾಷ್ಟ್ರಾಧ್ಯಕ್ಷರ ಬೆಂಬಲದೊಂದಿಗೆ ಕೆ.ಎಸ್.ಈಶ್ವರಪ್ಪರವರು ಬ್ರಿಗೇಡ್ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಇದು ಬಿ.ಎಸ್.ವೈ.ಹಾಗೂ ಮುರುಳೀಧರರಾವ್‌ರವರಿಗೆ ಆದ ಹಿನ್ನಡೆಯೆಂದೆ ಮಾತನಾಡಿಕೊಳ್ಳಲಾಗುತ್ತಿತ್ತು.  ರಾಷ್ಟ್ರಾಧ್ಯಕ್ಷರು ನೀಡಿದ್ದ ಸೂಚನೆ ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರೆ ಮುಖಂಡರು ಬಿ.ಎಸ್.ವೈ. ವಿರುದ್ದ ಮುನಿಸಿಕೊಂಡು ಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಅಂತಃಕಲಹಕ್ಕೆ ಕಾರಣವಾಗಿದ್ದು, ಪ್ರಸ್ತುತ ಭಾರಿ ದೊಡ್ಡ ಪ್ರಮಾಣದಲ್ಲಿ ಕಮಲ ಪಾಳೇಯದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ, ಮತ್ತೊಂದೆಡೆ ರಾಜ್ಯ ಉಸ್ತುವಾರಿ ಮುರುಳೀಧರರಾವ್‌ರವರು ಬೆಂಗಳೂರಿಗೆ ಭೇಟಿ ನೀಡಿದ್ದು, ಕೆ.ಎಸ್.ಈಶ್ವರಪ್ಪರವರನ್ನು ಭೇಟಿ ಮಾಡದೆ ಹೋಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News