×
Ad

ಬಸವಣ್ಣನವರ ವಚನ ಪ್ರವಚನ ಕಾರ್ಯಕ್ರಮ

Update: 2017-05-01 16:53 IST

ಚಿಕ್ಕಮಗಳೂರು, ಮೇ.1: 12ನೇ ಶತಮಾನದ ವಚನ ಚಳವಳಿಯಲ್ಲಿ ಸಮಾನತೆಯ ಕ್ರಾಂತಿಯನ್ನು ರೂಪಿಸಿ ಅದನ್ನು ಸಾಕಾರಗೊಳಿಸಿದ ಕೀರ್ತಿ ಈ ನೆಲದಲ್ಲಿ ಜನಿಸಿದ ಬಸವಣ್ಣನವರಿಗೆ ಸಲ್ಲುತ್ತದೆ. ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿದ ಶರಣರ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತರೀಕೆರೆ ತಾಲ್ಲೂಕು ಜಾನಪದ ಪರಿಷತ್ ಅದ್ಯಕ್ಷ ಎ.ಸಿ.ಚಂದ್ರಪ್ಪ ತಿಳಿಸಿದರು.

ಜಿಲ್ಲಾ ಸಿರಿಗನ್ನಡ ವೇದಿಕೆ ಮತ್ತು ಅಖಿಲ ಕರ್ನಾಟಕ ವಚನ ಸಾಹಿತ್ಯ ಪ್ರಚಾರ ಪರಿಷತ್ತು ಹಾಗೂ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಆಶ್ರಯದಲ್ಲಿ ಮುಗುಳಿ ಲಕ್ಷ್ಮೀದೇವಮ್ಮನವರ ಮನೆಯಂಗಳದಲ್ಲಿ ಆಯೋಜಿಸಿದ್ದ ಬಸವಣ್ಣನವರ ವಚನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಭಾವನಾತ್ಮಕ ಚಿಂತನೆಗಳು ಮನುಕುಲಕ್ಕೆ ಆದರ್ಶವಾಗಿವೆ. ಅವು ಎಂದೆಂದಿಗೂ ತನ್ನ ಮಹತ್ವವನ್ನು ಉಳಿಸಿಕೊಳ್ಳುತ್ತವೆ. ಎಲ್ಲಾ ಧರ್ಮಗಳ ಸಾರ ದಯೆ, ದಯೆಯೇ ಧರ್ಮದ ಮೂಲ ಎಂದು ವಿಶ್ವಕ್ಕೆ ಪರಿಚಯಿಸಿದವರು ಜಗಜ್ಯೋತಿ ಬಸವಣ್ಣನವರು ಎಂದರು.

ಜಿಲ್ಲಾ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಅಜ್ಜಂಪುರ ಅಪ್ಪಾಜಿ ಬಸು ಮಾತನಾಡಿದರು.

ಆಧ್ಯಾತ್ಮಿಕ ಚಿಂತಕರಾದ ಮುಗುಳಿ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಗುಳಿ ಲಕ್ಷ್ಮೀದೇವಮ್ಮ, ಜಾನಪದ ಪ್ರಪಂಚ ಪ್ರಶಸ್ತಿ ಪುರಸ್ಕೃತ ಗಡೀಹಳ್ಳಿ ಪದ್ಮಾವತಿ ಹಾಗೂ ಜಾನಪದ ಕಲಾವಿದರಾದ ಭಾಗ್ಯಮ್ಮ, ಮುಗುಳಿ ಹನುಮಂತಪ್ಪ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.

ಅಖಿಲ ಕರ್ನಾಟಕ ವಚನ ಸಾಹಿತ್ಯ ಪ್ರಚಾರ ಪರಿಷತ್ತು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಕಡೂರು ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮುಗುಳಿಕಟ್ಟೆ ಲೋಕೇಶ್, ಕಸಾಪ ಪ್ರಧಾನ ಸಂಚಾಲಕ ಬಿ. ಪ್ರಕಾಶ್, ಅಜ್ಜಂಪುರ ಗೆಳೆಯರ ಬಳಗದ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News