ಹಿಂದೂ ಧರ್ಮದ ಅನಿಷ್ಠ ಪದ್ಧತಿಗೆ ಸೆಡ್ಡು ಹೊಡೆದ ಬಸವಣ್ಣ: ಕೆ.ಟಿ.ರಾಧಾಕೃಷ್ಣ

Update: 2017-05-01 11:46 GMT

ಚಿಕ್ಕಮಗಳೂರು, ಮೇ.1: ಹಿಂದೂ ಧರ್ಮದ ಅನಿಷ್ಠ ಜಾತಿ ಪದ್ಧತಿ, ವರ್ಗ ತಾರತಮ್ಯ, ಲಿಂಗಭೇದದ ವಿರುದ್ಧ ಸೆಡ್ಡು ಹೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಕೊನೆ ಉಸಿರು ತನಕ ಹೋರಾಟ ಮಾಡಿದ ಕ್ರಾಂತಿಕಾರಿ ಪುರುಷ ಬಸವಣ್ಣ ಎಂದು ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ. ರಾಧಾಕೃಷ್ಣ ಬಣ್ಣಿಸಿದರು.

ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಳಜಾತಿಯ ಸಮಾಜದ ಜನ ಒಂದಿಷ್ಟು ಸ್ವಾಭಿಮಾನ, ದೇಶಪ್ರೇಮ ಹೊಂದಿದ್ದರೆ ಅದು ಹಿಂದೂ ಧರ್ಮದ ನೇತಾರರಿಂದಲ್ಲ. ಅದು ಬಸವಣ್ಣನವರಿಂದ ಮಾತ್ರ. ಜಾತಿ ಎಂಬ ಪೆಡಂಭೂತ ಇಂದು ತಾಂಡವ ಮಾಡುತ್ತಿರುವುದೇ ಇದಕ್ಕೆ ನಿದರ್ಶನವಾಗಿದೆ. ಅಸ್ಪ್ರಷ್ಯತೆ ವಿರುದ್ಧ ಸಿಡಿದೆದ್ದು ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹ, ಅವಮಾನಿತ ಜನರಿಗೆ ಲಿಂಗಧಾರಣೆ ಮಾಡುವಂತಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೆರವೇರಿಸಿರುವುದು ಇಂದಿಗೂ ಅಡಿಪಾಯವಾಗಿದೆ ಎಂದರು.

ಹಿರೇಮಗಳೂರು ರಾಮಚಂದ್ರ ಮಾತನಾಡಿ, ಸತ್ಯವನ್ನು ತಿರುಚಿ ಸುಳ್ಳನ್ನು ಸತ್ಯವೆಂದು ಹೇಳುತ್ತಿರುವ ಮನುವಾದಿಗಳಿಗೆ ಬಸವಣ್ಣನವರು ಸರಿಯಾದ ಚಾಟಿ ಏಟು ಕೊಟ್ಟಿದ್ದಾರೆ ಎಂದು ಹೇಳಿದರು.

ಬಿಎಸ್‌ಪಿ ನಾಯಕಿ ಕೆ.ಬಿ.ಸುಧ ಮಾತನಾಡಿ, ಸ್ತ್ರೀ ಸಮಾನತೆಗಾಗಿ ಹೋರಾಡಿದ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಮಹಿಳೆಯರು ಮೌಡ್ಯತೆ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಬಿಎಸ್‌ಪಿ ತಾಲ್ಲೂಕು ಉಪಾಧ್ಯಕ್ಷ ಹರೀಶ್, ರಾಜ್ಯ ಕಾರ್ಯದರ್ಶಿ ಜಿ.ಕೆ.ಬಸವರಾಜ್, ಮಹಿಳಾ ನಾಯಕಿಯಾದ ಮಂಜುಳಾ ಮತ್ತು ಹಾಲಪ್ಪ ಮಾತನಾಡಿದರು. ಕಚೇರಿ ಕಾರ್ಯದರ್ಶಿ ಕೆ.ಆರ್. ಗಂಗಾಧರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News