×
Ad

ಯುವಕನ ಜೀವಕ್ಕೆ ಕುತ್ತಾದ ಐಪಿಎಲ್ ಬೆಟ್ಟಿಂಗ್ ದಂಧೆ

Update: 2017-05-01 20:22 IST

ಚಾಮರಾಜನಗರ, ಮೇ 1: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿದ್ದ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಓರ್ವರ ಪುತ್ರ ನೇಣಿಗೆ ಶರಣಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿಯವರ ಪುತ್ರ ಸುದೀಪ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿ ಹಣ ಕಳೆದುಕೊಂಡಿದ್ದ. ಸುದೀಪ್ ಗೆ ಸಾಲ ನೀಡಿದ್ದ ವ್ಯಕ್ತಿಗಳು ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಸೋಮವಾರ ಸಂಜೆಯ ವೇಳೆಗೆ ಸುದೀಪ್‌ ಪತ್ನಿ ಪವಿತ್ರಾ ಕೋಣೆಯೊಳಕ್ಕೆ ಹೋದಾಗ ಸುದೀಪ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಈ ಸಂದರ್ಭ ಬೆಚ್ಚಿಬಿದ್ದ ಆಕೆ ಬೊಬ್ಬಿಟ್ಟಿದ್ದು, ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದ ಸುದೀಪ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸುದೀಪ್‌ಗೆ ವಿವಾಹವಾಗಿ ಆರು ವರ್ಷಗಳಾಗಿದ್ದು, ಪುಟ್ಟ ಮಗುವಿದೆ. ಕಳೆದ ಒಂದು ವಾರದಿಂದ ಪತ್ನಿ ಪವಿತ್ರಾ ತವರು ಮನೆಗೆ ತೆರಳಿದ್ದಳು. ಒಂದು ವಾರದಿಂದ ಒಂಟಿಯಾಗಿ ಮನೆಯಲ್ಲಿದ್ದ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದೀಪ್ ಸಂಬಂಧಿಕರು ಹೇಳುವಂತೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಚಾಮರಾಜನಗರ ಮತ್ತು ಬೆಂಗಳೂರಿನಲ್ಲಿ ಹಣ ತೊಡಗಿಸುತ್ತಿದ್ದ ಸುದೀಪ್ ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮನೆಯ ಮಾಲಕ ಮಲ್ಲೂಪುರ ಶಿವಕುಮಾರ್ ಹೇಳುವಂತೆ ಸುದೀಪ್ ಮತ್ತು ಕುಟುಂಬದವರು ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಒಂದು ವಾರದಿಂದ ಸುದೀಪ್‌ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದರು. ಒಂಟಿಯಾಗಿದ್ದ ಸುದೀಪ್ ಇದೇ ಮನೆಯಲ್ಲಿದ್ದರು. ಇಂದು ಸಂಜೆ ಸುದೀಪ್‌ರವರ ಪತ್ನಿ ಮನೆಗೆ ಬಂದು ನೋಡಿದಾಗ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗೊತ್ತಾಯಿತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News