​ಊರ್ಜಿತ್ ಪಟೇಲ್, ಅರವಿಂದ್ ಸುಬ್ರಹ್ಮಣ್ಯ ಪ್ರತಿಕೃತಿ ದಹನ

Update: 2017-05-01 17:23 GMT

ಮಂಡ್ಯ, ಮೇ.1: ರೈತರ ಸಾಲಮನ್ನಾ ಮಾಡಲು ವಿರೋಧ ಅಭಿಪ್ರಾಯ ವ್ಯಕ್ತಪಡಿಸಿರುವ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಪ್ರಧಾನಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯ ಅವರ ಪ್ರತಿಕೃತಿಯನ್ನು ರೈತರು ದಹಿಸಿದರು.

ರೈತಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸೋಮವಾರ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಮಾವೇಶಗೊಂಡ ರೈತರು, ಊರ್ಜಿತ್ ಪಟೇಲ್, ಅರವಿಂದ್ ಸುಬ್ರಹ್ಮಣ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ರೈತರ ಸಾಲಮನ್ನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆಂಬ ಊರ್ಜಿತ್ ಪಟೇಲ್ ಹಾಗೂ ಅರವಿಂದ್ ಸುಬ್ರಹ್ಮಣ್ಯ ಅವರ ಅಭಿಪ್ರಾಯ ಅವೈಜ್ಞಾನಿಕ. ದೇಶದ ಅಭಿವೃದ್ಧಿಯಲ್ಲಿ ಕೃಷಿಪಾತ್ರದ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ನೀತಿ ಆಯೋಗದ ಸದಸ್ಯರೊಬ್ಬರು ಕೃಷಿ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರುವ ಸಲಹೆ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೈಗಾರಿಕೆಗಳಿಗಿರುವ ಸೌಲಭ್ಯ ಕೃಷಿಗಿಲ್ಲ. ಕೃಷಿಗೆ ಕೈಗಾರಿಕೆ ಸ್ಥಾನಮಾನ ನೀಡಿ ತೆರಿಗೆ ಹಾಕಲಿ ಎಂದು ಪುಟ್ಟಣ್ಣಯ್ಯ ಸವಾಲು ಹಾಕಿದರು.

ರೈತರ ಸಾಲಮನ್ನಾ ಮಾಡಿದರೆ ದೇಶದ ಆರ್ಥಿಕತೆಗೆ ತೊಂದರೆಯಾಗುತ್ತದೆ ಎಂದು ಹೇಳುವವರು ಕಾರ್ಪೋರೇಟ್ ಉದ್ಯಮಿಗಳ ಕೋಟ್ಯಂತರ ರೂ. ಸಾಲಮನ್ನಾದಿಂದ ದೇಶದ ಆರ್ಥಿಕತೆ ಯಾವುದೇ ತೊಂದರೆಯಾಗುವುದಿಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಬೆರಳು ತೋರುವುದನ್ನು ಬಿಟ್ಟು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತರ ಉಳಿವಿಗೆ ಯೋಜನೆಗಳನ್ನು ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದರು.

ಕೋಣಸಾಲೆ ನರಸರಾಜು, ಸುರೇಶ್, ಕೀಲಾರ ಸೋಮಶೇಖರ್, ಇಂಡುವಾಳು ಸಿದ್ದೇಗೌಡ, ನಂದಿನಿ ಜಯರಾಂ, ಬಳ್ಳಾರಿಗೌಡ, ಬಿ.ಬೊಮ್ಮೇಗೌಡ, ಹನಿಯಂಬಾಡಿ ನಾಗರಾಜು, ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News