ಕಾಡಾನೆ ತುಳಿತಕ್ಕೆ ಒಳಗಾದವರಿಗೆ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಧರಣಿ
ಹಾಸನ, ಮೇ 2: ಕಾಡಾನೆ ಹಾವಳಿ ತಪ್ಪಿಸಿ, ತುಳಿತಕ್ಕೆ ಒಳಗಾದವರಿಗೆ ಪರಿಹಾರ ನೀಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಯಿತು.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಜಿಲ್ಲೆಯೂ ಕೂಡ ಬರಗಾಲದಿಂದ ತತ್ತರಿಸಿ ಹೋಗಿದೆ. ಅರಕಲಗೂಡು, ಸಕಲೇಶಪುರ, ಹಾಸನ, ಆಲೂರು ತಾಲೂಕುಗಳಲ್ಲಿ ಆನೆಗಳ ಕಾಟ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿದೆ. ರಾತ್ರಿ ಮತ್ತು ಹಗಲು ಸಮಯದಲ್ಲಿ ರೈತರು ತಮ್ಮ ಜಮೀನುಗಳ ಕಡೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವರ್ಷದಲ್ಲಿ 25 ಜನ ರೈತರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಕಾಡು ಪ್ರಾಣಿಗಳನ್ನು ಶಾಶ್ವತವಾಗಿ ತಡೆಯುವ ಯಾವುದೇ ಪ್ರಯತ್ನ ಜಿಲ್ಲಾಡಳಿತವಾಗಲಿ, ಅರಣ್ಯ ಇಲಾಖೆ ಹಾಗೂ ಸರಕಾರವಾಗಲಿ ಮಾಡುತ್ತಿಲ್ಲ ಎಂದು ಧರಣಿನಿರತರು ದೂರಿದರು.
ಕಾಫಿ, ಕಾಳುಮೆಣಸು, ಬಾಳೆ, ಭತ್ತ ನಾಶವಾಗಿದೆ. ಸಕಲೇಶಪುರ, ಯಸಲೂರು ಹೋಬಳಿ, ಹೊಸೂರು, ಚಂಗಡಿಹಳ್ಳಿ, ಹುಚ್ಚಂಗಿ, ಐಗೂರು, ಹೆತ್ತೂರು ಹೋಬಳಿ, ಕೂಡು ರಸ್ತೆ, ಕ್ಯಾನಳ್ಳಿ, ಬ್ಯಾಕರವಳ್ಳಿ, ಉಳ್ಳಳ್ಳಿ ಮತ್ತು ಆಲುರು, ಪಾಳ್ಯ, ಚಿಗಳೂರು, ನಿಡನೂರು ಇತರೆ ಭಾಗಗಳಲ್ಲಿ ಆನೆ ತುಳಿತದಿಂದ ಬೆಳೆ ನಾಶವಾಗಿದೆ. ಹಾನಿಗೊಳಾಗದ ರೈತರು ಅರಣ್ಯ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವ ಪರಿಹಾರ ದೊರಕಿರುವುದಿಲ್ಲ ಎಂದು ಧರಣಿನಿರತರು ಆರೋಪಿಸಿದರು.
ಈ ಸಂದರ್ಭ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಅನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಮೀಸೆ ರಾಜಣ್ಣ, ಸಾವಿತ್ರಮ್ಮ, ಶಾರದಮ್ಮ ಇತರರು ಭಾಗವಹಿಸಿದ್ದರು.