×
Ad

ಶಿವಮೊಗ್ಗ ಬಿಜೆಪಿ ಪಾಳಯದಲ್ಲಿ ನೀರವ ಮೌನ

Update: 2017-05-02 23:05 IST

ಬಹಿರಂಗ ಹೇಳಿಕೆ ನೀಡದಂತೆ ಮುಖಂಡರಿಗೆ ತಾಕೀತು
ಶಿವಮೊಗ್ಗ, ಮೇ 2: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನಡುವೆ ನಡೆಯುತ್ತಿರುವ ಕಲಹ ತಾರಕಕ್ಕೇರಿದ್ದು, ಇವರಿಬ್ಬರ ನಡುವಿನ ವೈಮನಸ್ಸಿನಿಂದ ಇಡೀ ರಾಜ್ಯ ಬಿಜೆಪಿ ಪಾಳಯ ಭಿನ್ನಮತದ ಬೇಗೆಯಲ್ಲಿ ಬೇಯಲಾರಂಭಿಸಿದೆ. ಬಣ ರಾಜಕಾರಣ ತೀವ್ರಗೊಂಡಿದೆ. ಮತ್ತೊಂದೆಡೆ ಈ ಇಬ್ಬರು ಮುಖಂಡರ ತವರೂರು, ಶಿವಮೊಗ್ಗ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಪ್ರಸ್ತುತ ನೀರವ ವೌನ ಸ್ಥಿತಿ ಕಂಡುಬರುತ್ತಿದೆ. ಪಕ್ಷ ಸಂಘಟನೆಯ ಕಾರ್ಯಕ್ರಮಗಳು ಸ್ತಬ್ಧ್ದವಾಗಿವೆ.

ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವೆ ಮುಖಂಡರು ಹರಿದು ಹಂಚಿ ಹೋಗಿದ್ದು, ಕೆಲ ಜಿಲ್ಲಾ ನಾಯಕರಂತೂ ಒಬ್ಬರು ಮತ್ತೊಬ್ಬರ ಮುಖ ನೋಡದಂತಹ ಸ್ಥಿತಿಯಲ್ಲಿದ್ದಾರೆ! ಆ ಮಟ್ಟಕ್ಕೆ ಮುಖಂಡರ ನಡುವೆ ವೈಮನಸ್ಸಿನ ಕರಿಛಾಯೆ ಆವರಿಸಿಕೊಂಡಿದೆ.  ಳೆದ ಕೆಲ ತಿಂಗಳುಗಳ ಹಿಂದೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ವೈಮನಸ್ಸು ಉಂಟಾದಾಗ ಎರಡೂ ಬಣದ ುುಖಂಡರು ಬಹಿರಂಗವಾಗಿಯೇ ಪರಸ್ಪರ ಆರೋಪ - ಪ್ರತ್ಯಾರೋಪ ನಡೆಸಿಕೊಂಡಿದ್ದರು. ಸುದ್ದಿಗೋಷ್ಠಿಯಲ್ಲಿಯೇ ಎರಡೂ ಬಣದ ನಾಯಕರು ಕಿತ್ತಾಡಿಕೊಂಡಿದ್ದರೇ, ಕಾರ್ಯಕರ್ತರು ಪಕ್ಷದ ಜಿಲ್ಲಾ ಕಚೇರಿಯ ಮುಂಭಾಗವೇ ಪರಸ್ಪರ ಹೊಡೆದಾಡಿಕೊಂಡಿದ್ದ ಘಟನೆ ಕೂಡ ನಡೆದಿತ್ತು.

ಇತ್ತೀಚೆಗೆ ಈ ಇಬ್ಬರು ನಾಯಕರ ನಡುವೆ ಮತ್ತೊಮ್ಮೆ ವೈಮನಸ್ಸು ಭುಗಿಲೆದ್ದ ವೇಳೆಯೂ, ಎರಡೂ ಬಣದ ನಾಯಕರು ಮತ್ತೊಮ್ಮೆ ಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸಿಕೊಂಡಿದ್ದರು. ಮತ್ತೊಮ್ಮೆ ಈ ಹಿಂದೆ ನಡೆದ ಹೈಡ್ರಾಮಾಗಳು ನಡೆಯುವ ಲಕ್ಷಣಗಳು ದಟ್ಟವಾಗಿದ್ದವು. ಇದರ ಮಾಹಿತಿ ಅರಿತ ಕೇಂದ್ರ ಹಾಗೂ ರಾಜ್ಯ ಮುಖಂಡರು ಎರಡೂ ಬಣದ ಜಿಲ್ಲಾ ನಾಯಕರಿಗೆ ಸಂಯಮ ಕಾಯ್ದುಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಯಾರೊಬ್ಬರು ಬಹಿರಂಗ ಹೇಳಿಕೆ ನೀಡದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಬ್ರಿಗೇಡ್‌ಗೂ ರಾಜಕೀಯಕ್ಕೂ ಸಂಬಂಧ ಇಲ್ಲ: ಕೆ.ಇ.ಕಾಂತೇಶ್
 ಸಂಘಟನೆ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೆ.ಎಸ್.ಈಶ್ವರಪ್ಪಕೆಲಸ ಮಾಡುತ್ತಿದ್ದು, ಸಂಘಟನೆಯ ಸೂಚನೆಯನ್ನು ಅವರು ಪಾಲಿಸುತ್ತಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಅವರಾಗಿದ್ದಾರೆ’ ಎಂದು ಕೆ.ಎಸ್.ಈಶ್ವರಪ್ಪ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಕೆ.ಇ.ಕಾಂತೇಶ್ ತಮ್ಮ ತಂದೆಯ ಪರ ಬ್ಯಾಟಿಂಗ್ ನಡೆಸಿದ್ದಾರೆ. ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಲ್ಲರನ್ನು ವಿಶ್ವಾಸಕ್ಕೆಪಡೆದು, ಪಕ್ಷವನ್ನು ಒಟ್ಟಾಗಿ ಮುನ್ನಡೆಸಬೇಕಾದ ಗುರುತರ ಜವಾಬ್ದಾರಿ ಪಕ್ಷದ ಎಲ್ಲ ನಾಯಕರ ಮೇಲಿದೆ’ ಎಂದು ತಿಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ.

ಈಗಾಗಲೇ ಇದನ್ನು ಕೆ.ಎಸ್.ಇ.ರವರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳು ಕೂಡ ರಾಜಕೀಯೇತರವಾಗಿವೆ ಎಂದು ತಿಳಿಸಿದ್ದಾರೆ. ದಲಿತರು, ಹಿಂದುಳಿದವರು, ಶೋಷಿತರ ಶ್ರೇಯೋಭಿವೃದ್ಧಿಗಾಗಿ ಬ್ರಿಗೇಡ್ ಸ್ಥಾಪಿಸಲಾಗಿದೆ. ಆ ನಿಟ್ಟಿನಲ್ಲಿ ಬ್ರಿಗೇಡ್ ಕೂಡ ಪ್ರಾಮಾಣಿಕ ಕಾರ್ಯನಿರ್ವಹಣೆ ಮಾಡುತ್ತಿದೆ. ಎಲ್ಲೆಡೆಯಿಂದ ಬ್ರಿಗೇಡ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದು ಬ್ರಿಗೇಡ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News