×
Ad

ಕಾರ್ಮಿಕ ಸಿದ್ಧಾಂತದಲ್ಲಿ ಕಾಂಗ್ರೆಸ್-ಸಿಪಿಐ ಸಮಾನ: ಸಚಿವ ಆಂಜನೇಯ

Update: 2017-05-02 23:08 IST

ಚಿತ್ರದುರ್ಗ, ಮೇ 2: ದೇಶದಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ಶ್ರಮಿಕ ವರ್ಗದ ಪರವಿದ್ದು, ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಿ ದುಡಿಯವ ಕೈ ಬಲಪಡಿಸಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಭಾರತ ಕಮ್ಯುನಿಸ್ಟ್ ಪಕ್ಷ, ಎ.ಐ.ಟಿ.ಯು.ಸಿ., ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಗನವಾಡಿ ಇಂದಿರಾಗಾಂಧಿ ನೀಡಿದ ಕೊಡುಗೆಯಾಗಿದ್ದು, ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿದೆ. ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಇದರ ಫಲವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 4,500 ಸಂಬಳ ಹೆಚ್ಚಿಸಿದ್ದೇವೆ. ಆದರೆ, ಬಿಜೆಪಿ ಈ ವರೆಗೆ ಎಷ್ಟು ಬಡಪರ ವಾದ ಯೋಜನೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಲಿ ಎಂದು ಬಿಜೆಪಿಗೆ ಸಚಿವರು ಪ್ರಶ್ನೆ ಹಾಕಿದರು.

ಸಿಪಿಐ, ಕಾಂಗ್ರೆಸ್ ಒಂದೇ ತತ್ವ ಸಿದ್ಧಾಂತ ಹೊಂದಿದ್ದು, ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿವೆ. ಎರಡು ಪಕ್ಷದ ನಿಲುವು ಏಕ ಹಾದಿಯಲ್ಲಿ ಸಾಗಿವೆ. ಇಂದಿರಾ ಗಾಂಧಿ ಕಾಲದಿಂದಲೂ ರಾಜಕೀ ಯ ಹೊಂದಾಣಿಕೆ ಮಾಡಿಕೊಂಡು ಬರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾರ್ಮಿಕ ಸಂಘಟನೆಗಳ ತತ್ವದ ಮೇಲೆ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಮನಮೋಹನ್ ಸಿಂಗ್ ಜಾರಿಗೆ ತಂದ ನರೇಗಾದಿಂದ ಬರದಲ್ಲೂ ಜನರು ಗುಳೆ ಹೋಗುತ್ತಿಲ್ಲ. ಭೇದಭಾವವಿಲ್ಲದೆ 234 ಕೂಲೀ ನೀಡಲಾಗುತ್ತಿದೆ. ಜತೆಗೆ ಅನ್ನಭಾಗ್ಯ, ಬಿಸಿಯೂಟ, ಸಬ್ಸಿಡಿಯಲ್ಲಿ ಬೇಳೆ ವಿತರಣೆಯಿಂದ ಹಸಿವು ಮುಕ್ತ ರಾಜ್ಯವಾಗಲಿದೆ ಎಂದರು. ಕಾರ್ಮಿಕರ ಕಷ್ಟವನ್ನು ನಾನು ಸ್ವತಃ ಅನುಭವಿಸಿದ್ದು, ಸಮಯ ನಿಗದಿಯಿಲ್ಲದೆ ಹೊತ್ತು ಹುಟ್ಟಿದಾಗಿನಿಂದ ಮುಳುಗುವವರೆಗೂ ಕೆಲಸ ಮಾಡಿದರೂ ಕೂಲಿ ಸಿಗುವುದು ಕಷ್ಟವಾಗಿತ್ತು. ಆದರೆ, ಇಂದು ಕಾಲ ಬದಲಾಗಿದ್ದು, ಎಂಟು ಗಂಟೆ ಕೆಲಸಕ್ಕೆ ನಿರ್ದಿಷ್ಟ ಹಣ ಸಿಗುತ್ತಿದೆ. ಶ್ರಮ ಫಲ ಸಮಾನ ಹಂಚಿಕೆಯಾದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ ಎಂದರು.ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಣ್ಣ ಮಾತನಾಡಿದರು.

ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಂ.ಬಿ.ಬಸವರಾಜ್, ಕಾಂ.ಗಣೇಶ್, ಕಾಂ.ಜಿ.ಸಿ.ಸುರೇಶ್‌ಬಾಬು.ಕಾಂ.ಎ.ಬಿ.ಜಯದೇವಮೂರ್ತಿ ಸತ್ಯಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

ದೇಶವನ್ನು ಆಳುತ್ತಿರುವ ಬಿಜೆಪಿ ಸರಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ, ಕಾರ್ಮಿಕರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಇರುವ ಕಾರ್ಮಿಕರ ಮಸೂದೆಗಳಿಗೆ ತಿದ್ದುಪಡಿಯನ್ನು ತರುವುದರ ಮೂಲಕ ಕಾರ್ಮಿಕರನ್ನು ಮತ್ತಷ್ಟು ಶೋಷಿತರನ್ನಾಗಿ ಮಾಡುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಾಗುವುದು. ಪ್ರಧಾನಿ ಮೋದಿಯ ಮಾತಿಗೆ ಮರುಳಾಗಿ ಎಲ್ಲರೂ ತಲೆಯಾಡಿಸುತ್ತಾ ಕಾರ್ಮಿಕರ ಹಿತವನ್ನು ಮರೆಯುತ್ತಿದ್ದಾರೆ. ಶಿವಣ್ಣ , ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News