×
Ad

ಪಾಲೇಮಾಡು ನಿವಾಸಿಗಳಿಂದ ಪಾದಯಾತ್ರೆ ಆರಂಭ

Update: 2017-05-02 23:10 IST

ಮಡಿಕೇರಿ, ಮೇ 2 : ಹೊದ್ದೂರು ಗ್ರಾಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾವ್ ನಗರದ ನಿವಾಸಿಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ, ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಮತ್ತು ಪಾಲೇಮಾಡು ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವಂತೆ ಒತ್ತಾಯಿಸಿ ಆರಂಭಿಸಿರುವ ಎರಡು ದಿನಗಳ ಪಾದಯಾತ್ರೆಗೆ ಪಾಲೇಮಾಡಿನಲ್ಲಿ ಚಾಲನೆ ನೀಡಲಾಯಿತು.

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಷ ನಮನ ಅರ್ಪಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಲ್ಲಿನ ಜನರ ನಿವೇಶನಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಬಡ ಜನಾಂಗ, ಆದಿವಾಸಿಗಳು, ಅಲ್ಪಸಂಖ್ಯಾತರು, ದಲಿತರು ಅನ್ಯಾಯದ ವಿರುದ್ಧ ಸಿಡಿದೇಳುತ್ತಿರುವುದು ಸ್ವಾಗತಾರ್ಹವಾಗಿದೆ. ಜಿಲ್ಲೆಯಲ್ಲಿ ಪ್ರಬಲ ಜನಾಂಗದ ದರ್ಪ, ದೌರ್ಜನ್ಯಗಳಿಗೆ ಸಿಲುಕಿದವರು ನಮಗೂ ಸ್ವಾತಂತ್ರ್ಯ ಬೇಕು ಎಂದು ಹೋರಾಟಕ್ಕಿಳಿದಿರುವುದು ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವಾಗಿದೆ ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.

ಪಾಲೇಮಾಡುವಿನಿಂದ ಪಾದಯಾತ್ರೆಯಲ್ಲಿ ಹೊರಟ ಪ್ರತಿಭಟನಾಕಾರರು ಬಲಮುರಿ, ಮೂರ್ನಾಡು, ಹಾಕತ್ತೂರು ಮಾರ್ಗವಾಗಿ ಸಾಗಿ ಮೇಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮಂಗಳವಾರ ರಾತ್ರಿ ತಂಗಿದ್ದಾರೆ.

ಇಂದು ಜಿಲ್ಲಾಧಿಕಾರಿಗೆ ಮನವಿ: ಬುಧವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಪತ್ರ ಸಲ್ಲಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಬಹುಜನ ಸಮಾಜ ಪಕ್ಷ, ವಸತಿ ಮತ್ತು ಭೂಮಿ ಹಕ್ಕು ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಹುಜನ ವಿದ್ಯಾರ್ಥಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಆದಿವಾಸಿ ಸಂಘ, ಟಿ.ಯು.ಸಿ.ಐ, ಸಿ.ಪಿ.ಐ ಹಾಗೂ ಪ್ರಗತಿಪರ ಸಂಘಟನೆಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿವೆ.

ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ರಾಜ್ಯ ಸಂಚಾಲಕ ಸಿರಿಮನೆ ನಾಗರಾಜ್, ಜಿಲ್ಲಾ ಸಂಚಾಲಕ ನಿರ್ವಾಣಪ್ಪ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಯ್ಸಿನ್, ವಕೀಲ ವಿದ್ಯಾಧರ್, ಬಿಎಸ್‌ಪಿ ಮೈಸೂರು ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್, ಮೈಸೂರು ನಗರಾಧ್ಯಕ್ಷ ಪ್ರತಾಪ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರೇಂ ಕುಮಾರ್, ಸಂಯೋಜಕ ರಫೀಕ್ ಖಾನ್, ಉಪಾಧ್ಯಕ್ಷ ಜಯಪ್ಪ ಹಾನಗಲ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ, ಜಿಲ್ಲಾ ಖಜಾಂಚಿ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ಕೆ.ಮೊಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಜಯರಾಜ್, ಕುಸುಮಾವತಿ, ಚಿತ್ರ ದೇವರಾಜ್, ಜಯರಾಜ್, ಹರೀಶ್ ಪುಟ್ಟಣ್ಣ, ದಿಲೀಪ್ ಕುಮಾರ್, ಬಿವಿಎಸ್ ಜಿಲ್ಲಾ ಸಂಯೋಜಕ ಮೋಹನ್ ವೌರ್ಯ ಇತರರು ಪಾದಯಾತ್ರೆಯಲ್ಲಿ ಸಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News