×
Ad

ದಿಡ್ಡಳ್ಳಿ: ತೆರವುಗೊಳಿಸಿದ ಜಾಗದಲ್ಲೇ ಮತ್ತೆ ಗುಡಿಸಲು ನಿರ್ಮಿಸಿದ ಆದಿವಾಸಿಗಳು

Update: 2017-05-03 11:20 IST

ಸಿದ್ದಾಪುರ, ಮೇ 3: ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳಿಗೆ ಸರಕಾರ ಸೂಕ್ತ ನಿವೇಶನದ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಈ ಹಿಂದೆ ತಮ್ಮನ್ನು ತೆರವುಗೊಳಿಸಿದ ಜಾಗದಲ್ಲೇ ರಾತ್ರೋರಾತ್ರಿ 100ಕ್ಕೂ ಅಧಿಕ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಆದಿವಾಸಿ ಮುಖಂಡೆ ಮುತ್ತಮ್ಮ ನೇತೃತ್ವದಲ್ಲಿ ಆದಿವಾಸಿಗಳು ಮಂಗಳವಾರ ರಾತ್ರಿ 100ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿದೆ.

ಸ್ಥಳದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಮುತ್ತಮ್ಮ, ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದು, ಸರಕಾರ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿಲ್ಲ. ನಮಗೆ 2 ಎಕರೆ ಜಮೀನು ಹಾಗೂ ಮೂಲ ಸೌಕರ್ಯಗಳೊಂದಿಗೆ ಮನೆ ನಿರ್ಮಿಸಿ ಕೊಟ್ಟರೆ ಬೇರೆ ಕಡೆ ತೆರಳುತ್ತೇವೆ. ಅದುವರೆಗೂ ಇಲ್ಲೇ ಇರುತ್ತೇವೆ ಎಂದ ಅವರು, ಈಗಾಗಲೇ ಸರಕಾರ ಗುರುತಿಸಿರುವ ಜಾಗಗಳಿಗೆ ತೆರಳುವವರು ತೆರಳಲಿ, ನಮ್ಮ ಅಭ್ಯಂತರ ಇಲ್ಲ. ಹೋರಾಟಗಾರರು ನಮ್ಮಲ್ಲಿ ಒಡಕು ಮೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರು ಇಲ್ಲಿಗೆ ಬರಬಾರದು ಎಂದರು.

ದಿಡ್ಡಳ್ಳಿ ನಿರಾಶ್ರಿತರಿಗಾಗಿ ಸರಕಾರ ಗುರುತಿಸಿರುವ ಜಾಗಗಳಿಗೆ ತೆರಳಲು ಹಲವು ಕುಟುಂಬಗಳು ಮುಂದಾಗಿದ್ದು, ಈಗಾಗಲೇ 90ಕ್ಕೂ ಹೆಚ್ಚು ಕುಟುಂಬಗಳು ಸ್ಥಳಕ್ಕೆ ಭೇಟಿ ನೀಡಿ ತೆರಳುವ ಸೂಚನೆ ನೀಡಿರುವ ಮಧ್ಯದಲ್ಲಿ ದಿಡ್ಡಳ್ಳಿಯಲ್ಲಿ ಗುಡಿಸಲು ತಲೆ ಎತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಎಸಿಎಫ್ ಶ್ರೀಪತಿ, ಆರ್‌ಎಫ್‌ಒ ಗೋಪಾಲ್, ಡಿವೈಎಸ್ಪಿ ಛಬ್ಬಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಗುಡಿಸಲುಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News