ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಮರೆಯಬಾರದು: ಸಾಹಿತಿ ನಾ.ಡಿಸೋಜ
ಸಾಗರ, ಮೇ 3: ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ ಟಿಪ್ಪು ಸುಲ್ತಾನ್ ಹೆಸರಿಗೆ ಇತ್ತೀಚಿನ ದಿನಗಳಲ್ಲಿ ಮಸಿ ಬಳಿಯುವ ಕೃತ್ಯಗಳು ನಡೆಯುತ್ತಿದೆ. ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ನಾವೆಂದೂ ಮರೆಯಬಾರದು ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು.
ಮೇ 4ರಂದು ಮೈಸೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಡೆಯಲಿರುವ ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ ಕಾರ್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಟಿಪ್ಪು ಸುಲ್ತಾನ್ 17 ವರ್ಷ ರಾಜ್ಯಭಾರ ಮಾಡಿದ್ದಾರೆ. ಅವರನ್ನು ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ. ನಾಡಿನ ಜನರಿಗೆ ಕೈಗಾರಿಕೆಯನ್ನು, ದೇಶವಿದೇಶಗಳ ಕುಶಲಕರ್ಮಿಗಳನ್ನು ಕರೆಸಿ ಕರಕುಶಲ ಕಲೆಯನ್ನು ಪರಿಚಯಿಸಿದ ಹೆಗ್ಗಳಿಕೆ ಟಿಪ್ಪು ಸುಲ್ತಾನ್ ಅವರದ್ದಾಗಿದೆ ಎಂದರು.
ಸಂಘಟನೆಯ ಶಶಿಧರ್ ಮಾತನಾಡಿ, ಕರಾವಳಿಗೂ ಟಿಪ್ಪುವಿಗೂ ಅವಿನಾಭಾವ ಸಂಬಂಧವಿದೆ. ಕರಾವಳಿ ಭಾಗದಲ್ಲಿ ಬಜರಂಗದಳದವರು ಟಿಪ್ಪುವಿನ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ತಪ್ಪು ಸಂದೇಶವನ್ನು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಹಿಂದೂದ್ವೇಷಿ ಎನ್ನುವುದು ಶುದ್ಧಸುಳ್ಳು. ಇತಿಹಾಸ ಅರಿಯದ ಯುವಕರು ಟಿಪ್ಪುವನ್ನು ಮತಾಂತರಿ, ಹಿಂದೂದ್ವೇಷಿ ಎಂದು ಹೇಳುವ ಮೂಲಕ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ಮೂಲಭೂತವಾದಿಗಳು ಟಿಪ್ಪುವಿನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಟಿಪ್ಪು 150ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಲ್ಲಿ ತನ್ನ ಆಡಳಿತಾವಧಿಯಲ್ಲಿ ನಿತ್ಯಪೂಜೆಗೆ ಅನುವು ಮಾಡಿಕೊಟ್ಟಿದ್ದನು. ಶೃಂಗೇರಿ ದೇವಸ್ಥಾನ ಪುನರ್ ನಿರ್ಮಾಣ ಮಾಡುವಲ್ಲಿ ಟಿಪ್ಪುವಿನ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಸಂಚಾಲಕ ಎಚ್.ಬಿ.ರಾಘವೇಂದ್ರ ಮಾತನಾಡಿ, ಟಿಪ್ಪುವಿನ ನಿಜ ಜೀವನವನ್ನು ತಿಳಿಸುವ ಸಲುವಾಗಿ ಮೈಸೂರಿನಲ್ಲಿ ಮೇ 4ಕ್ಕೆ ಬೃಹತ್ ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಸಮಾವೇಶಕ್ಕೆ ಸುಮಾರು 2 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಸಾಗರ ತಾಲ್ಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಮೊ. 9481235424, 9448106607 ಸಂಪರ್ಕಿಸಬಹುದು ಎಂದು ತಿಳಿಸಿದರು.