ರಾಯಣ್ಣ ಬ್ರಿಗೇಡ್ ನಿಲ್ಲಿಸುವ ಮಾತೇ ಇಲ್ಲ : ಕೆ.ಎಸ್. ಈಶ್ವರಪ್ಪ
ದಾವಣಗೆರೆ,ಮೇ 3: ರಾಜ್ಯದ ಎಲ್ಲರಿಗೂ ನ್ಯಾಯ ಕೊಡಿಸುವ ಸಂಘಟನೆಯಾಗಿ ರಾಯಣ್ಣ ಬ್ರಿಗೇಡ್ ಹೊರ ಹೊಮ್ಮುತ್ತಿದೆ. ಆದ್ದರಿಂದ ಬ್ರಿಗೇಡ್ ನಿಲ್ಲಿಸುವ ಮಾತೇ ಇಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿ, ಸುದ್ದಿಗಾರರೊಡನೆ ಮಾತನಾಡಿದ ಅವರು, ಹಿಂದುಳಿದ ವರ್ಗ, ದಲಿತರು, ಲಿಂಗಾಯತ, ಬ್ರಾಹ್ಮಣ ಎಲ್ಲಾ ವರ್ಗದ ಬಡವರಿಗೂ ನ್ಯಾಯ ಕೊಡಿಸುವ ಸಂಘಟನೆಯಾಗಿ ಬ್ರಿಗೇಡ್ ಕೆಲಸ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಬ್ರಿಗೇಡ್ ಚಟುವಟಿಕೆ ನಿಲ್ಲಿಸಬಾರದೆಂಬ ಉದ್ದೇಶವಿದೆ ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್‌ಗೆ ಪದಾಧಿಕಾರಿ ನೇಮಿಸಿದ್ದೇವೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಎರಡೂ ಘಟಕಕ್ಕೆ ಪದಾಧಿಕಾರಿ ನೇಮಿಸಲಾಗಿದೆ. ಮೇ 8ಕ್ಕೆ ರಾಯಚೂರಿನಲ್ಲಿ ಬ್ರಿಗೇಡ್‌ನ ಅಭ್ಯಾಸ ವರ್ಗ ಆಯೋಜಿಸಲಾಗಿದೆ ಎಂದರು, ಅಭ್ಯಾಸ ವರ್ಗಕ್ಕೆ ಉಭಯ ಘಟಕದಿಂದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ತಲಾ ಮೂವರು ಪದಾಧಿಕಾರಿಗಳಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವರು. ಹಿಂದುಳಿದ ವರ್ಗ, ದಲಿತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ? ಎಂಬ ಬಗ್ಗೆ ಚರ್ಚಿಸುವುದೇ ವರ್ಗದ ಮುಖ್ಯ ಅಜೆಂಡಾ ಎಂದು ಹೇಳಿದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಪಕ್ಷದ ತತ್ವ, ಸಿದ್ಧಾಂತ, ವಿಚಾರ ಅರಿತ ಸುಸಂಸ್ಕೃತರ ಸರ್ಕಾರ ಬರಬೇಕೆಂದೆ ಇಷ್ಟೆಲ್ಲಾ ಹೋರಾಟ ನಡೆಸಿದ್ದೇನೆ. ಬಿಜೆಪಿಯ 17 ಸಂಸದರು ರಾಜ್ಯವನ್ನು ಪ್ರತಿನಿಧಿಸಿದ್ದರೂ ಪಕ್ಷದಲ್ಲಿ ಗೊಂದಲವೇಕೆಂಬ ಪ್ರಶ್ನೆ ಸಹಜವಾಗಿಯೇ ಜನರಲ್ಲೂ ಇದೆ.ಪಕ್ಷದ ತತ್ವ, ಸಿದ್ಧಾಂತ ಗೊತ್ತಿದ್ದವರೇ ಶಾಸಕರು, ಸಚಿವರಾಗಬೇಕು. ಸುಸಂಸ್ಕೃತ ಸರ್ಕಾರ ಬರಬೇಕೆಂಬ ಅಭಿಲಾಷೆ ಎಂದರು.
ಪ್ರಧಾನಿ ಮೋದಿ ಸರ್ಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮಸೂದೆ ಮಂಡಿಸಿದೆ. ಅದನ್ನು ಲೋಕಸಭೆಯಲ್ಲಿ ಮೋದಿ ಸರ್ಕಾರ ಸರ್ವಾನುಮತದಿಂದ ಅಂಗೀಕರಿಸಿದೆ. ಆದರೆ, ರಾಜ್ಯಸಭೆಯಲ್ಲಿ ಮಸೂದೆಗೆ ವಿಪಕ್ಷ ಕಾಂಗ್ರೆಸ್, ಇತರೆ ಪಕ್ಷಗಳು ವಿರೋಧ ಮಾಡದಿದ್ದರು, ಜಂಟಿ ಸದನದ ಜಾಯಿಂಟ್ ಸೆಲೆಕ್ಷನ್ ಕಮಿಟಿಗೆ ಹಾಕಿ, ಅಂಗೀಕಾರಕ್ಕೆ ಅಡ್ಡಿಪಡಿಸಿವೆ ಎಂದು ದೂರಿದರು.
ಸಂಘ ಪರಿವಾರದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಅವರು ಸಂಘದ ಪ್ರತಿನಿಧಿಯಾಗಿ ಬಿಜೆಪಿ ರಾಷ್ಟ್ರೀಯ ನಾಯಕನಾಗಿ ಬೆಳೆದವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ, 2018ರ ಚುನಾವಣೆಗೆ 224 ಕ್ಷೇತ್ರದಲ್ಲೂ ರಾಜ್ಯ ನಾಯಕರು ಸಮೀಕ್ಷೆ ನಡೆಸಿ, ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದ ನಂತರವೇ ಬಿಜೆಪಿ ಟಿಕೆಟ್ ನೀಡಲಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.