ಪುರಸಭೆ ಸದಸ್ಯರಿಗೆ ವಿಶ್ರಾಂತಿ ಕೊಠಡಿ ಸದಸ್ಯರ ಮತ್ತು ಅಧ್ಯಕ್ಷರ ಗುಂಪುಗಳ ಜಟಾಪಟಿ
ಬಾಗೇಪಲ್ಲಿ.ಮೇ 3 ; ಪುರಸಭೆ ಸದಸ್ಯರಿಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿ ವಿಚಾರದಲ್ಲಿ ಸದಸ್ಯರ ಮತ್ತು ಅಧ್ಯಕ್ಷರ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದ ಪ್ರಸಂಗ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪುರಸಭೆ ಅಧ್ಯಕ್ಷೆ ಮಮತ ನಾಗರಾಜರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಬಿ.ಎಚ್.ಆರೀಫ್ ಪುರಸಭೆಯ ವಿರೋಧ ಪಕ್ಷದ ಸದಸ್ಯರಿಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಯನ್ನು ನೀಡುವಂತೆ ಹಲವು ತಿಂಗಳುಗಳಿಂದ ಕೇಳುತ್ತಿದ್ದರು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದಾಗ ಉತ್ತರಿಸಿದ ಮುಖ್ಯಾಧಿಕಾರಿ ಜಿ.ಎನ್.ಚಲಪತಿ ಅವರು ಪುರಸಭೆ ಸದಸ್ಯರಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಕೇಳಲಾಗಿದೆ ಎಂದರು.
ಇದರಿಂದ ಕುಪಿತರಾದ ಸದಸ್ಯ ಪಿ.ಒಬಳರಾಜು,ಜಬೀವುಲ್ಲಾ ಮಾತನಾಡಿ ಸದಸ್ಯರ ಮಾತಿಗೆ ಗೌರವ ಇಲ್ಲವೇ ಅನುಮತಿಗಾಗಿ ಎಷ್ಟು ತಿಂಗಳು ಕಾಲಾವಕಾಶಬೇಕು ಎಂದು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಅಧ್ಯಕ್ಷರು ಎಲ್ಲಾ ಸದಸ್ಯರ ಅನುಮತಿ ಪಡೆದು ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದರು, ಸದಸ್ಯ ಬಿ.ಎಚ್.ಆರೀಫ್ ಅವರು ನಮ್ಮ ಮಾತಿಗೆ ಗೌರವ ಕೊಡದೆ ಇದ್ದರೆ ಸಭೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಮಹಮದ್ ಅಕ್ರಂ ಮದ್ಯಪ್ರವೇಶಿಸಿ ಸದಸ್ಯರಿಗೆ ವಿಶ್ರಾಂತಿ ಕೊಠಡಿ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಅವಶ್ಯಕತೆ ಇಲ್ಲ ಕೂಡಲೇ ಸದಸ್ಯರಿಗೆ ವಿಶ್ರಾಂತಿ ಪಡೆಯಲು ಕೊಠಡಿಯನ್ನು ಕೊಡಿ ಎಂದರು.
ಸದಸ್ಯ ಪಿ.ಒಬಳರಾಜು ಮಾತನಾಡಿ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೇವಲ 5 ಸಾವಿರರೂಗಳ ವೇತನ ನೀಡುತ್ತಿರುವುದು ವಿಷಾದನೀಯ ಎಂದರು ಗೌರಿಬಿದನೂರು,ಚಿಕ್ಕಬಳ್ಳಾಪುರ ನಗರಗಳ ಪೌರಕಾರ್ಮಿಕರಿಗೆ 14,300 ರೂಗಳ ವೇತನ ನೀಡಲಾಗುತ್ತಿದೆ.ತಕ್ಷಣ ಈ ತಾರತಮ್ಯ ಸರಿಪಡಿಸಿ ಎಂದು ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದರು.
ಸದಸ್ಯ ಬಿ.ಎನ್.ಶ್ರೀನಿವಾಸ ಮಾತನಾಡಿ ರಸ್ತೆಗಳಲ್ಲಿ ಎಲ್ಲಂದರಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲು ಮುಖ್ಯಾಧಿಕಾರಿಗಳು ಕೇವಲ 5 ವಾರ್ಡ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟೆಂಡರ್ ಪ್ರಕ್ರಿಯೆ ನಡೆಸಿರುವುದು ಎಷ್ಟು ಸಮಂಜಸ ಎಂದು ಮುಖ್ಯಾಧಿಕಾರಿಗಳ ವಿರುದ್ದ ಕಿಡಿಕಾರಿದಾಗ ಉತ್ತರಿಸಿದ ಮುಖ್ಯಾಧಿಕಾರಿಗಳು ಯಾವ ವಾರ್ಡ್‌ನಿಂದ ಕ್ರಿಯಾ ಯೋಜನೆ ಮಾಡಲಾಗಿದೆಯೋ ಅ ವಾರ್ಡ್‌ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ.ಉಳಿದ ವಾರ್ಡ್‌ಗಳ ಸದಸ್ಯರು ಕೂಡಲೇ ಕ್ರಿಯಾ ಯೋಜನೆಗಳನ್ನು ನೀಡಿದರೆ ಈ ವಾರ್ಡ್‌ಗಳಲ್ಲಿ ಸಹ ಟೆಂಡರ್ ಪ್ರಕ್ರಿಯೆ ಮುಗಿಸಿಕೊಡಲಾಗುವುದು ಎಂದರು.
ಈ ಸಭೆಯಲ್ಲಿ ಉಪಾಧ್ಯಕ್ಷೆ ಹುಸೇನ್‌ಬೀ, ಸದಸ್ಯರಾದ ಜ್ಯೋತಿ ಗೋವರ್ದನಚಾರಿ,ಎ.ನಂಜುಂಡ,ಶ್ರೀನಿವಾಸ ಅಪ್ಪಯ್ಯ ಬಾಬು,ಎಲ್.ಬಾಸ್ಕರ್,ವನಜ ರವಿ,ರಾಧಮ್ಮ,ಚೆನ್ನಮ್ಮ,ಸರೋಜಮ್ಮ,ಉಷಾರಾಣಿ,ಶಭಾನ,ಎಇಇ ಚಕ್ರಪಾಣಿ,ಕಂದಾಯ ಅಧಿಕಾರಿ ನಾಗರಾಜ್ ಆರೋಗ್ಯ ನೀರಿಕ್ಷಕ ಎ.ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.