​ಲಿಂಬೋ ಸ್ಕೇಟಿಂಗ್‌ನಲ್ಲಿ ಪ್ರಿಯದರ್ಶಿನಿ ವಿಶ್ವ ದಾಖಲೆ

Update: 2017-05-03 17:35 GMT

ಕಾರವಾರ, ಮೇ 3: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದ ಎನ್‌ಪಿಸಿಐಎಲ್ ವಸತಿ ಸಂಕೀರ್ಣದ ಪ್ರಿಯದರ್ಶಿನಿ ಎಂ. ಹಿರೇಮಠ ಎಂಬ 5 ವರ್ಷದ ಬಾಲಕಿಯು, ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ಹೊಸ ದಾಖಲೆ ರಚಿಸಿದ್ದಾಳೆ.

ಕೈಗಾದ ಸ್ಕೇಟಿಂಗ್ ರಿಂಕ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದ್ದಾಳೆ. 50 ಮೀಟರ್ ದೂರದವರೆಗೆ ನೆಲದಿಂದ 6.5 ಇಂಚು ಎತ್ತರದಲ್ಲಿ 40 ಕಬ್ಬಿಣದ ಬಾರ್‌ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಇವುಗಳ ಅಡಿಯಲ್ಲಿ ಕಣ್ಣಿಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡು ಹಿಮ್ಮುಖವಾಗಿ ನುಸುಳಿ ಕೇವಲ 22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನೆರೆದವರ ಮೆಚ್ಚುಗೆ ಗಳಿಸಿದಳು.

ವೀಕ್ಷಕರಾಗಿ ಬಂದಿದ್ದ ದಿಲ್ಲಿಯ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥ ಪ್ರಮೋದ್ ರೂಹಿಯಾ ಬಾಲಕಿಯ ಸಾಧನೆಯನ್ನು ವಿಶ್ವ ದಾಖಲೆ ಎಂದು ಘೋಷಿಸಿ ಪ್ರಿಯದರ್ಶಿನಿಗೆ ಪ್ರಮಾಣ ಪತ್ರವನ್ನು ನೀಡಿದರು.

ಸಹ ವೀಕ್ಷಕರಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನ ಮಾರಿಯಾ ಗೋಮ್ಸ್ಸ್ ಆಗಮಿಸಿದ್ದರು. ಈಕೆಯ ಸಾಧನೆಯ ಪ್ರದರ್ಶನವನ್ನು ಸಂಪೂರ್ಣವಾಗಿ ಚಿತ್ರೀಕರಿಸಿ ಕೊಳ್ಳಲಾಗಿದ್ದು, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಗುವುದು ಎಂದು ತರಬೇತುದಾರ ದಿಲೀಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News