ಹುಸಿಯಾಯಿತು ರಕ್ಷಣಾ ಸಚಿವರ ಭರವಸೆ: ಆರೋಪ
ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಒಕ್ಕೂಟದ ಸಭೆ
ಕಾರವಾರ, ಮೇ 3: ತಾಲೂಕಿನ ತೋಡುರು ಸಣ್ಣಮ್ಮಾ ದೇವಸ್ಥಾನದ ಆವರಣದಲ್ಲಿ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಒಕ್ಕೂಟದ ಪದಾಧಿಕಾರಿಗಳ ಹಾಗೂ ಮುಂಖಡರ ಸಭೆ ನಡೆಯಿತು.
ಕಳೆದ 30 ವರ್ಷಗಳಿಂದ ಭರವಸೆಯ ಮಾತುಗಳನ್ನು ಕೇಳಿ ಸಾಕಾಗಿ ಹೋಗಿದೆ. ರಕ್ಷಣಾ ಇಲಾಖೆ ಈವರೆಗೆ ನಿರಾಶ್ರಿತರ ಕುಟುಂಬ ನಿರ್ವಹಣೆಗೆಂದು ಮನೆಗೊಂದು ಉದ್ಯೋಗವನ್ನು ನೀಡಿಲ್ಲ. ಈ ಬಗ್ಗೆ ಕೇಂದ್ರ ಸರಕಾರಕ್ಕೆ, ರಕ್ಷಣಾ ಮಂತ್ರಿಯವರಿಗೆ ಎಷ್ಟೋ ಸಲ ಮನವರಿಕೆ ಮಾಡಿಕೊಟ್ಟಿದ್ದರು ಅವರಿಗೆ ನಿರಾಶ್ರಿತರ ಮೇಲೆ ಅನುಕಂಪ, ಕರುಣೆ ಬರುತ್ತಿಲ್ಲ. ರಕ್ಷಣಾ ಸಚಿವರು ಈ ಹಿಂದೆ ಕಾರವಾರಕ್ಕೆ ಆಗಮಿಸಿದ್ದ ವೇಳೆ ಪರಿಹಾರದ ಕುರಿತು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದ ಮುಖಂಡರು, ತೀರ್ಪು ಪ್ರಕಟವಾದ ಎಲ್ಲಾ ಭೂ ಪರಿಹಾರದ ಪ್ರಕರಣಗಳಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕು ಎಂದರು.
ಪ್ರತಿನಿಧಿಗಳು ಪರಿಹಾರದ ಬಗ್ಗೆ ಹಿಂದಿನಿಂದಲೂ ಕೂಡ ಮೇಲಿಂದ ಮೇಲೆ ಭರವಸೆ ನೀಡುತ್ತಲೇ ಬಂದಿದ್ದು ಮುಗ್ಧ ಬಡ ನಿರಾಶ್ರಿತರು ಅವರನ್ನು ನಂಬಿ ತಮ್ಮ ಕಷ್ಟಕರ ಜೀವನ ಸಾಗಿಸುತ್ತಾ ಪರಿಹಾರದ ಹಣ ಇವತ್ತು ನಾಳೆ ಸಿಗಬಹುದೆಂಬ ನೀರಿಕ್ಷೆಯಲ್ಲಿದ್ದು, ಶೀಘ್ರ ಈ ಬಗ್ಗೆ ನಿರ್ಣಯವಾಗಬೇಕು ಎಂದು ಸಭೆಯಲ್ಲಿದ್ದ ಪದಾಧಿಕಾರಿಗಳು ಆಗ್ರಹಿಸಿದರು.
ಪರಿಹಾರದ ನಿರೀಕ್ಷೆಯಲ್ಲಿದ್ದ ಎಷ್ಟೊ ನಿರಾಶ್ರಿತರು ಮರಣ ಹೊಂದುತ್ತಿದ್ದಾರೆ. ತಾವು ಕೇಳುತ್ತಿರುವುದು ನಮ್ಮ ಪಿತ್ರಾರ್ಜಿತರ ಸ್ವಂತ ಜಮೀನಿನ ಪರಿಹಾರದ ಹಣವೆ ಹೊರತು ಭಿಕ್ಷೆಯಲ್ಲ. ಸಮಯಕ್ಕೆ ಪರಿಹಾರ ಕೊಡಲು ಸಾಧ್ಯವಾಗದಿದ್ದರೆ ತಮ್ಮ ಜಮೀನು ನಮಗೆ ಹಿಂದಿರುಗಿಸಬೇಕು ಎಂದರು.
ವಿಶೇಷ ಭೂ ಸ್ವಾಧೀನ ಅಧಿಕಾರಿ ಕಳೆದ 6 ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದು, ಅವರ ಸ್ಥಳಕ್ಕೆ ಕರ್ನಾಟಕ ಸರಕಾರ ಈವರೆಗೆ ಯಾರನ್ನು ನೇಮಿಸಿಲ್ಲ. ಇದರ ಪರಿಣಾಮ ಕಲಂ 28 ರ ಎಷ್ಟೋ ಪ್ರಕರಣಗಳು ತೀರ್ಪು ಬರಲು ಮತ್ತು ಪರಿಹಾರಕ್ಕೆ ವಿಳಂಬವಾಗುತ್ತಿದೆ. ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.
ಮೊದಲ ಹಂತದಲ್ಲಿ ಜಮೀನು ಕಳೆದುಕೊಂಡವರಿಗೆ ಮೊದಲ ಆದ್ಯತೆ ಮೆರೆಗೆ ಎಲ್ಲರಿಗೂ ಪೂರ್ತಿ ಪರಿಹಾರ ನೀಡಿ ಆ ಬಳಿಕ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಇಲಾಖೆ ಹಾಗೂ ಕೇಂದ್ರ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಒಕ್ಕೂಟದ ಅಧ್ಯಕ್ಷಗಜಾನನವ್ಹಿ. ನಾಯ್ಕ, ಸುಭಾಷ ಎಸ್. ನಾಯ್ಕ, ರೋಹಿದಾಸ ಎನ್. ನಾಯ್ಕ, ಹರಿದಾಸ ಬಿ. ನಾಯ್ಕ ಮತ್ತಿತರರಿದ್ದರು.
ಕಳೆದ ವರ್ಷ ಅಂದಿನ ರಕ್ಷಣಾ ಮಂತ್ರಿ ಮನೋಹರ ಪರಿಕ್ಕರ್ ಕಾರವಾರಕ್ಕೆ ಭೇಟಿ ನೀಡಿದಾಗ ಆರು ತಿಂಗಳೊಳಗೆ ಎಲ್ಲ ನಿರಾಶ್ರಿತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾಡಳಿತ 600 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಬೆಂಗಳೂರು ಡಿಫೆನ್ಸ್ ಆಫೀಸರ್ ಮೂಲಕ ರಕ್ಷಣಾ ಮಂತ್ರಿಗಳಿಗೆ ಮಾಹಿತಿ ಕಳುಹಿಸಿತ್ತು. ಆದರೆ ವರ್ಷವಾದರೂ ಪರಿಹಾರ ಬಿಡುಗಡೆಯಾಗಿಲ್ಲ. ಒಕ್ಕೂಟದ ಪದಾಧಿಕಾರಿಗಳು, ಮುಂಖಡರು