ದಿಡ್ಡಳ್ಳಿ: ತೆರವುಗೊಳಿಸಿದ ಜಾಗದಲ್ಲೇ ಮತ್ತೆ ಗುಡಿಸಲು ಕಟ್ಟಿದ ಆದಿವಾಸಿಗಳು
ಸಿದ್ದಾಪುರ, ಮೇ 3: ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳಿಗೆ ಸರಕಾರ ಸರಿಯಾದ ರೀತಿಯಲ್ಲಿ ನಿವೇಶನದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ, ಆದಿವಾಸಿ ಮುಖಂಡೆ ಮುತ್ತಮ್ಮ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಆದಿವಾಸಿಗಳು ಈ ಹಿಂದೆ ತೆರವುಗೊಳಿಸಿದ ಜಾಗದಲ್ಲೇ 100ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿದ್ದಾರೆ.
ಅರಣ್ಯಕ್ಕೆ ಅಕ್ರಮ ಪ್ರವೇಶ ಮತ್ತು ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಮುತ್ತಮ್ಮ ಸೇರಿದಂತೆ ಹಲವರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿವಾಸಿ ಮುಖಂಡೆ ಮುತ್ತಮ್ಮ ಮಾಧ್ಯಮ ದೊಂದಿಗೆ ಮಾತನಾಡಿ, ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದು, ಸರಕಾರ ಸರಿಯಾದ ವ್ಯವಸ್ಥೆ ಮಾಡಿಕೊಟ್ಟಿಲ್ಲ. ನಮಗೆ 2 ಎಕರೆ ಜಮೀನು ಹಾಗೂ ಮೂಲಸೌಕರ್ಯಗಳೊಂದಿಗೆ ಮನೆ ಕಟ್ಟಿಕೊಟ್ಟರೆ ಬೇರೆ ಕಡೆ ತೆರಳುತ್ತೇವೆ. ಅದುವರೆಗೂ ಇಲ್ಲೇ ಇರುತ್ತೇವೆ ಎಂದ ಅವರು, ಈಗಾಗಲೇ ಸರಕಾರ ಗುರುತಿಸಿರುವ ಜಾಗಗಳಿಗೆ ತೆರಳುವವರು ತೆರಳಲಿ ನಮ್ಮ ಅಭ್ಯಂತರ ಇಲ್ಲ ಎಂದರು.
ಈಗಾಗಲೇ 90ಕ್ಕೂ ಹೆಚ್ಚು ಕುಟುಂಬಗಳು ಸ್ಥಳಕ್ಕೆ ಭೇಟಿ ನೀಡಿ ತೆರಳುವ ಸೂಚನೆ ನೀಡಿರುವ ಸಂದರ್ಭದಲ್ಲಿ ತೆರವುಗೊಳಿಸಿರುವ ಸ್ಥಳದಲ್ಲೇ ಮತ್ತೆ ಗುಡಿಸಲು ತಲೆ ಎತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಎಸಿಎಫ್ ಶ್ರೀಪತಿ, ಆರ್‌ಎಫ್‌ಒ ಗೋಪಾಲ್, ಡಿವೈಎಸ್ಪಿ ಛಬ್ಬಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.