ಅಂತರ್ಜಲ ಬಳಕೆಗೆ ಕಡಿವಾಣ ಅಗತ್ಯ

Update: 2017-05-03 18:51 GMT

ನಿರಂತರ ಬರಗಾಲದಿಂದ ತತ್ತರಿಸಿರುವ ಕರ್ನಾಟಕದ ಎಲ್ಲೆಡೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ವಿಜಯಪುರದಂತಹ ನಗರಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿಯಿದೆ. ನೀರಿಗಾಗಿ ರಾಜ್ಯದಲ್ಲಿ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಸರಕಾರ ಭೂಮಿಯ ಆಳದಲ್ಲಿರುವ ನೀರಿನ ಹರಿವನ್ನು ಮೇಲೆತ್ತುವ ಯೋಜನೆ ರೂಪಿಸಿದೆ. ಭೂಮಿಯ ಆಳದಲ್ಲಿರುವ ತೈಲವನ್ನು ಮೇಲೆತ್ತುವಂತೆ, ಅಷ್ಟೇ ಆಳದಲ್ಲಿರುವ ನೀರನ್ನು ಮೇಲೆತ್ತುವ ಈ ಯೋಜನೆಗೆ ‘ಪಾತಾಳಗಂಗೆ’ ಯೋಜನೆ ಎಂದು ಹೆಸರಿಡಲಾಗಿದೆ.

ಅಮೆರಿಕದ ಕಂಪೆನಿಯೊಂದರ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ರಾಜ್ಯದ 10 ಕಡೆ ಗಂಟೆಗೆ 80,000 ಲೀ. ನೀರನ್ನು ಭೂಮಿಯಿಂದ ಮೇಲೆತ್ತುವ ಸಾಮರ್ಥ್ಯದ ಬಾವಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಬಾವಿಗಳಿಗೆ ಸರಾಸರಿ ತಲಾ 10 ಕೋಟಿ ರೂ. ವೆಚ್ಚವಾಗಲಿದೆ ಎಂದು ಪಂಚಾಯತ್‌ರಾಜ್ ಇಲಾಖೆ ಹೇಳಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ರಾಜ್ಯದ ಅನೇಕ ತಾಲೂಕುಗಳಲ್ಲಿ 40-50 ಕೊಳವೆ ಬಾವಿ ತೋಡಿದರೂ ನೀರು ಗೋಚರಿಸುತ್ತಿಲ್ಲ.

ಇಂತಹ ಭೀಕರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ಭೂಮಿಯ ಇನ್ನಷ್ಟು ಆಳದಿಂದ ನೀರನ್ನು ಮೇಲೆತ್ತಿ ತರುವ ಯೋಜನೆ ರೂಪಿಸಿದೆ. ಈ ಯೋಜನೆಯ ಬಗ್ಗೆ ಪ್ರಜ್ಞಾವಂತ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪಾತಾಳದಲ್ಲಿರುವ ನೀರನ್ನು ನಾವೇ ಬಳಸಿಕೊಂಡರೆ ಮುಂದಿನ ತಲೆಮಾರು ಏನು ಮಾಡಬೇಕು ಎಂಬ ಬಗ್ಗೆ ಪ್ರಶ್ನೆಗಳು ಕೂಡಾ ಮೂಡುತ್ತಿವೆ. ಆದರೆ, ಸರಕಾರ ತುರ್ತಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಆಸಕ್ತಿ ಹೊಂದಿರುವುದರಿಂದ ಇಂತಹ ಪ್ರಶ್ನೆಗಳಿಗೆ ಸ್ಪಂದಿಸುತ್ತಿಲ್ಲ.

ರಾಜ್ಯದ ಕೆಲ ತಾಲೂಕುಗಳ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ಸಾವಿರಾರು ಅಡಿಗಳಷ್ಟು ಆಳದ ಕೊಳವೆ ಬಾವಿ ತೋಡಿದರೂ ಹನಿ ನೀರೂ ಸಿಗುತ್ತಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ರಾಯಚೂರು, ತುಮಕೂರು ಮುಂತಾದ ಜಿಲ್ಲೆಗಳ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ಈ ಹಿನ್ನೆಲೆಯಲ್ಲಿ ಜನರ ಬಾಯಾರಿಕೆ ಇಂಗಿಸಲು ಸರಕಾರ ಕೈಗೆತ್ತಿಕೊಂಡ ಪಾತಾಳ ಗಂಗೆ ಯೋಜನೆ ಉಪಯುಕ್ತವಾಗಿದೆ ಎಂದು ಶ್ಲಾಘಿಸಬಹುದು.

ಆದರೆ, ಅಂತರ್ಜಲದ ಅತೀ ಬಳಕೆಯ ಪರಿಣಾಮ ಈಗ ನಮ್ಮ ಕಣ್ಣಮುಂದಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆಯೋ ಅಲ್ಲಿನ ಬರಗಾಲ ಪರಿಸ್ಥಿತಿಗೆ ಬಹುತೇಕ ಅಂತರ್ಜಲದ ಬಳಕೆ ಕೂಡಾ ಒಂದು ಕಾರಣವಾಗಿದೆ. ಕೆಲ ಜಿಲ್ಲೆಗಳಲ್ಲಿ ಕುಡಿಯಲು ಮಾತ್ರವಲ್ಲ, ಕೃಷಿ ಉದ್ದೇಶಗಳಿಗಾಗಿ ಅತಿಯಾಗಿ ಅಂತರ್ಜಲವನ್ನು ಬಳಸಿಕೊಂಡ ಪರಿಣಾಮ ಪರಿಸ್ಥಿತಿ ಹದಗೆಟ್ಟುಹೋಗಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಝೀರ್ ಸಾಬ್ ಅವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಕ್ಕಾಗಿ ಪ್ರತೀ ಹಳ್ಳಿಯಲ್ಲಿ ಮತ್ತು ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದರು. ಅಂತಲೇ ಅವರಿಗೆ ‘ನೀರುಸಾಬ್’ ಎಂಬ ಬಿರುದು ಕೂಡಾ ಬಂತು. ಅವರ ಉದ್ದೇಶ ಪ್ರಾಮಾಣಿಕವಾಗಿತ್ತು. ಆದರೆ, ಸರಕಾರ ಕೊರೆಸಿದ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಅಂತರ್ಜಲದ ಬಳಕೆಗೆ ಸರಕಾರ ಯಾವುದೇ ಕಡಿವಾಣ ಹಾಕಲಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣ ಕುಸಿಯುತ್ತಾ ಬಂತು. ಅಂತಲೇ ಸರಕಾರ 2013ರಲ್ಲಿ ರಾಜ್ಯದ 30 ತಾಲೂಕುಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ನಿಷೇಧ ಹೇರಿತು. ಆದರೆ, ಈ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ಬರಲಿಲ್ಲ. ತೀವ್ರ ನೀರಿನ ಬರ ಇರುವ ಪ್ರದೇಶಗಳಲ್ಲಿ ಅನೇಕ ಕಡೆ ಅಪಾಯಕಾರಿ ಅರ್ಸೆನಿಕ್ ಮತ್ತು ಪ್ಲೋರೈಡ್ ಮತ್ತಿತರ ರಾಸಾಯನಿಕಗಳ ಪ್ರಮಾಣ ಅಧಿಕವಾಗಿರುವುದರಿಂದ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಪ್ಲೋರೈಡ್ ನೀರು ಕುಡಿದು ಅನೇಕ ಕಡೆ ಜನಸಾಮಾನ್ಯರು ನಾನಾ ಕಾಯಿಲೆಗೆ ತುತ್ತಾಗಿದ್ದಾರೆ. ಕೊಳವೆ ಬಾವಿಯನ್ನು ಹೆಚ್ಚೆಚ್ಚು ಆಳಕ್ಕೆ ಕೊರೆದಂತೆ ನೀರಿನಲ್ಲಿನ ರಾಸಾಯನಿಕ ಸಾಂದ್ರತೆ ಹೆಚ್ಚಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದಲೇ ಪಾತಾಳ ಗಂಗೆಯಂತಹ ಯೋಜನೆಯನ್ನು ರೂಪಿಸುವ ಮುನ್ನ ಇದರ ಪರಿಣಾಮಗಳ ಬಗ್ಗೆ ಸರಕಾರ ಯೋಚನೆ ಮಾಡಬೇಕು.

ಕುಡಿಯುವ ನೀರಿನ ಅಭಾವ ನಿವಾರಿಸಬೇಕಾದರೆ ಮಳೆ ನೀರು ಕೊಯ್ಲು, ಕೆರೆ ಕಟ್ಟೆ ಮತ್ತು ನದಿಗಳ ಪುನರುಜ್ಜೀವನದಂತಹ ನೈಸರ್ಗಿಕ ಮತ್ತು ಸುಸ್ಥಿರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಹಿಡಿದಿಟ್ಟು ಉಪಯೋಗಿಸಿಕೊಳ್ಳಬಹುದು. ನೀರಿನ ಮಿತವಾದ ಬಳಕೆ ಮತ್ತು ಸಂರಕ್ಷಣೆಯಂತಹ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾಗಿದೆ. ಅಂತರ್ಜಲ ಎಂಬುದು ಒಂದೇ ತಲೆಮಾರು ಅನುಭವಿಸಲಿಕ್ಕಿರುವುದಲ್ಲ. ಮನುಕುಲ ಸಾವಿರಾರು ವರ್ಷ ಬಳಸಲು ಇರುವ ಅಮೂಲ್ಯ ನಿಧಿ ಅದು. ಹೀಗಾಗಿ ಅಂತರ್ಜಲ ಬಳಕೆ ಎಂಬುದು ನಮ್ಮ ಕಟ್ಟಕಡೆಯ ಆಯ್ಕೆ ಆಗಿರಬೇಕು. ಈ ನಿಟ್ಟಿನಲ್ಲಿ ಪಾತಾಳ ಗಂಗೆ ಯೋಜನೆ ಜಾರಿಗೆ ತರುವ ಬಗ್ಗೆ ಸರಕಾರ ಪುನರ್‌ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಮಳೆಗಾಲದಲ್ಲಿ ಮಳೆಯ ನೀರನ್ನೆಲ್ಲ ಸಮುದ್ರಕ್ಕೆ ಹರಿಯಬಿಟ್ಟು, ಭೂಮಿಯ ಮೇಲಿನ ಸಿಹಿನೀರನ್ನು ಸಿಕ್ಕಾಪಟ್ಟೆ ಬಳಸಿ ಖಾಲಿ ಮಾಡಿ, ಈಗ ಅಂತರ್ಜಲಕ್ಕೂ ಲಗ್ಗೆ ಹಾಕಿ ಆಗಿದೆ. ಮುಂದಿನ ತಲೆಮಾರಿಗೂ ಜೋಪಾನವಾಗಿ ಕಾದಿಡಬೇಕಾಗಿದ್ದ ನೆಲದಾಳದಲ್ಲಿರುವ ಜೀವ ಜಲವನ್ನು ಬರಿದು ಮಾಡಲು ಹೊರಟಿರುವುದು ಸರಿಯಲ್ಲ. ಅಧಿಕಾರದಲ್ಲಿರುವವರಿಗೆ ಇಂತಹ ಸಲಹೆಗಳನ್ನು ಯಾರು ಕೊಡುತ್ತಾರೋ ಗೊತ್ತಿಲ್ಲ. ಆದರೆ, ಇಂತಹ ಯೋಜನೆ ಜಾರಿಗೆ ತರುವ ಮುನ್ನ ಸರಕಾರ ಪರಿಸರ ತಜ್ಞರು ಹಾಗೂ ವಿಜ್ಞಾನಿಗಳ ಜೊತೆಗೆ ಸಮಾಲೋಚನೆ ಮಾಡುವುದು ಅಗತ್ಯವಾಗಿದೆ. ನೀರಿನ ದಾಹ ಇದೆಯೆಂದು ಭೂಮಿಯನ್ನೇ ಅಗೆದು ನೆಲದಾಳದ ನೀರನ್ನು ತೆಗೆದರೆ ಭೂಮಿಯ ನೀರಿನ ಅಂಶ ಬತ್ತಿ ಕಾಲಕ್ರಮೇಣ ಮಣ್ಣೆಲ್ಲಾ ಶುಷ್ಕವಾಗಿ ಬರಡಾಗಿ ಹೋಗುತ್ತದೆ.

ಮುಂದೆ ಅಂತಹ ಸ್ಥಿತಿ ನಿರ್ಮಾಣವಾದರೆ ಜೀವ ಸಂಕುಲದ ಉಳಿವಿಗೆ ಗಂಡಾಂತರ ಉಂಟಾಗುತ್ತದೆ. ಆದ್ದರಿಂದ ಸರಕಾರ ಈ ಬಗ್ಗೆ ತಕ್ಷಣ ಪರಾಮರ್ಶೆ ನಡೆಸಬೇಕು. ವಿನಾಶಕಾರಿಯಾದ ಈ ಯೋಜನೆಯನ್ನು ಕೈಬಿಡಬೇಕು. ಅಂತರ್ಜಲ ಬಳಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪರಿಸ್ಥಿತಿ ಈಗಾಗಲೇ ಗಂಭೀರವಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಪಾತಾಳ ಗಂಗೆ ಯೋಜನೆಗೆ ಬಳಸಲು ಉದ್ದೇಶಿಸಿರುವ ಹಣವನ್ನು ಮಳೆ ನೀರು ಸಂಗ್ರಹಕ್ಕೆ ಬಳಸಿದರೆ ಅನುಕೂಲವಾಗುತ್ತದೆ.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತನ್ನು ನೀಡಬೇಕು. ಕೆರೆಗಳ ಹೂಳನ್ನು ತೆಗೆದು ಅವುಗಳನ್ನು ಸುಸ್ಥಿತಿಗೆ ತರಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಪ್ರತೀ ವರ್ಷ ಭೂದಿನ ಆಚರಿಸಿದರೆ ಸಾಲದು. ಭೂಮಿಯನ್ನು ಸುರಕ್ಷಿತವಾಗಿ ಇಡಲು ಕೆರೆ, ನದಿ, ಹಳ್ಳ, ಕೊಳ್ಳ, ಬಾವಿಗಳನ್ನು ನಾವು ಕಾಪಾಡಿಕೊಳ್ಳಬೇಕು. ಅಂತರ್ಜಲ ಪ್ರಮಾಣ ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News