ದೇಗುಲ, ಮಸೀದಿ, ಚರ್ಚ್‌ಗಳು ಭಗವಂತ ಮತ್ತು ಭಕ್ತರ ನಡುವಿನ ಸೇತುವೆ: ಸಿ.ಟಿ.ರವಿ
ಚಿಕ್ಕಮಗಳೂರು, ಮೇ.4: ದೇವಾಲಯ, ಮಸೀದಿ, ಚರ್ಚ್‌ಗಳು ಭಗವಂತ ಮತ್ತು ಭಕ್ತರ ನಡುವಿನ ಸೇತುವೆಯಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ನಗರದ ವಿಜಯಪುರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಹೋಲಿ ಫ್ಯಾಮಿಲಿ ಚರ್ಚ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಅವರು, ಮಂದಿರ, ಮಸೀದಿ, ಚರ್ಚ್‌ಗಳು ತಮ್ಮಲ್ಲಿಗೆ ಬರುವ ಭಕ್ತರಿಗೆ ಉತ್ತಮ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು. ಭಕ್ತರನ್ನು ಯೋಗ್ಯರನ್ನಾಗಿ ರೂಪಿಸುವ ಕೆಲಸ ಮಾಡಬೇಕು. ಭಗವಂತ ಒಬ್ಬನೇ ಆಗಿದ್ದು, ಆಕಾಶದಿಂದ ಬೀಳುವ ಮಳೆ ಹನಿ ಅಂತಿಮವಾಗಿ ಸಾಗರವನ್ನೇ ಸೇರುವಂತೆ ನಾವು ಯಾವುದೇ ರೀತಿ ಮಾಡುವ ಪ್ರಾರ್ಥನೆ, ಪೂಜೆ, ಆರಾಧನೆ ಭಗವಂತನನ್ನೇ ಸೇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ.ಅಂತೋಣಿ ಸ್ವಾಮಿ ಮಾತನಾಡಿ, ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾಗಿ ಮನಶ್ಯಾಂತಿ ಮತ್ತು ನೆಮ್ಮದಿ ಅಗತ್ಯವಾಗಿದ್ದು, ಅವು ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳಿಗೆ ತೆರಳುವುದರಿಂದ ದೊರೆಯುತ್ತವೆ ಎಂದು ಹೇಳಿದರು.
ಚರ್ಚ್‌ನಲ್ಲಿ ಗುರುಗಳಾಗಿ ಈ ಹಿಂದೆ ಸೇವೆ ಸಲ್ಲಿಸಿದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಕಟ್ಟಡವನ್ನು ವಿನ್ಯಾಸಗೊಳಿಸಿದ ಹಾಗೂ ನಿರ್ಮಾಣ ಮಾಡಿದ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಚರ್ಚ್‌ನಿಂದ ಹೊರತರಲಾದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮಂಗಳೂರು ಶಾಸಕ ಜೆ.ಆರ್.ಲೋಬೋ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರು ಜಾರ್ಜ್ ಡಿಸೋಜ ನೂತನ ಚರ್ಚ್‌ನ ಧರ್ಮಗುರು ಪೀಟರ್ ಬ್ರಾಂಕ್, ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಮರ್ವಿನ್ ಮತ್ತು ಲಿಯೋನನ್ ಕಾರ್ಯಕ್ರಮವನ್ನು ನಿರೂಪಿಸಿದರು, ಬೆನಟಿಕ್ ಜೇಮ್ಸ್ ಸ್ವಾಗತಿಸಿದರು. ಗ್ರೇಸಿ ಕಾರ್ಲೊ ವಂದಿಸಿದರು.