ಶಿವಮೊಗ್ಗ ತಾಪಂ ಸಭೆ: ಊಟೋಪಚಾರ ವೆಚ್ಚದ ವಿಷಯದಲ್ಲಿ ಮಾತಿನ ಚಕಮಕಿ!
ಶಿವಮೊಗ್ಗ, ಮೇ 4: ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಊಟ, ತಿಂಡಿ, ಚಹಾದ ಖರ್ಚುವೆಚ್ಚದ ಬಗ್ಗೆ ಭಾರೀ ಚರ್ಚೆ ನಡೆಯಿತು!. ವೆಚ್ಚದ ಮಾಹಿತಿ ನೀಡಲು ನಿರಾಕರಿಸಿದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಕೆಲ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಕಾರ್ಯನಿರ್ವಹಣಾಧಿಕಾರಿ ಕ್ಷಮಾಪಣೆ ಕೇಳಿದ ನಂತರ ಈ ವಿಷಯದ ಚರ್ಚೆಗೆ ತೆರೆ ಬಿದ್ದಿತು.
ಕಾರ್ಯನಿರ್ವಹಣಾಧಿಕಾರಿ ಮೂಕಪ್ಪಗೌಡರು ಸಭೆಯ ಖರ್ಚುವೆಚ್ಚದ ಬಗ್ಗೆ ಮಾಹಿತಿ ನೀಡುವ ವೇಳೆ, ಮಾಸಿಕ ಸಭೆಯಲ್ಲಿ ನೀಡಲಾಗುವ ತಿಂಡಿ-ಊಟೋಪಚಾರದ ಖರ್ಚುವೆಚ್ಚದ ಮಾಹಿತಿ ನೀಡುವಂತೆ ಕೆಲ ಸದಸ್ಯರು ಆಗ್ರಹಿಸಿದರು. ಮಾಹಿತಿ ನೀಡಲು ಇ.ಒ. ನಿರಾಕರಿಸಿದರು. ಈ ವೇಳೆ ಸದಸ್ಯರು ಹಾಗೂ ಇ.ಒ. ನಡುವೆ ಮಾತಿನ ಚಕಮಕಿ ನಡೆಯಿತು.
"ಊಟ, ತಿಂಡಿ ಲೆಕ್ಕ ಕೇಳಬಾರದು ಎಂದರೆ ನಿಮ್ಮ ಹಣ ಹಾಕಿ ತರಿಸುತ್ತೀರಾ. ಮಾಹಿತಿ ನೀಡುವುದಿಲ್ಲ ಎಂದರೆ ಏನರ್ಥ. ಸದಸ್ಯರೊಂದಿಗೆ ಗೌರವದಿಂದ ಮಾತನಾಡಿ" ಎಂದು ಕೆಲ ಸದಸ್ಯರು ಇ.ಒ.ರನ್ನು ತರಾಟೆಗೆ ತೆಗೆದುಕೊಂಡರು.
ಪರಿಸ್ಥಿತಿಯನ್ನು ಅರಿತ ತಾಪಂ ಲೆಕ್ಕಾಧಿಕಾರಿ ಶಿವಾನಂದ ಮೂರ್ತಿ ಮಧ್ಯಪ್ರವೇಶಿಸಿ ಮಾತನಾಡಿ, ಇಒ ಪರ ತಾನು ಕ್ಷಮೆಯಾಚಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಸಹಮತ ವ್ಯಕ್ತಪಡಿಸದ ಸದಸ್ಯರು, "ಸಭೆಯಲ್ಲಿ ಅಧಿಕಾರಿ ಇರುವಾಗ ನೀವೇಕೆ ಕ್ಷಮೆಯಾಚಿಸುತ್ತೀರಿ. ಅವರೇ ಕ್ಷಮೆಯಾಚಿಸಬೇಕು" ಪಟ್ಟು ಹಿಡಿದರು. ಈ ವೇಳೆ ಇ.ಒ. ಎದ್ದು ನಿಂತು ಕ್ಷಮೆಯಾಚಿಸಿದರು.
ಆಕ್ರೋಶ: ಸಭೆ ಆರಂಭವಾಗುತ್ತಿದ್ದಂತೆ ಸಭೆಯ ನಡಾವಳಿಯನ್ನು ಸದಸ್ಯರಿಗೆ ಮೊದಲೇ ಕಳುಹಿಸಿಕೊಟ್ಟಿಲ್ಲ. ಇದರಿಂದ ಸಭೆಯ ಬಗ್ಗೆ ಸದಸ್ಯರು ಸಮರ್ಪಕ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಬೇಕು ಎಂದು ಸದಸ್ಯರೊಬ್ಬರು ಆಗ್ರಹಿಸಿದರು. ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು. ಒಂದು ವಾರ ಮೊದಲೇ ನಡಾವಳಿ ಕಳುಹಿಸಿಕೊಡಲಾಗುವುದು ಎಂದರು. ತಾಪಂ ಅಧಿಕಾರಿ ಮಾತನಾಡಿ, ಕಚೇರಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದ ಸಕಾಲದಲ್ಲಿ ನಡಾವಳಿ ತಲುಪಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ವಿಳಂಬವಾಗದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದರು.
ಆಕ್ರೋಶ: ಮೆಸ್ಕಾಂ ಸಹಾಯಕ ಇಂಜಿನಿಯರ್ ಅಥವಾ ಮೇಲ್ಪಟ್ಟ ಅಧಿಕಾರಿಗಳು ಸಭೆಗೆ ಬಾರದೆ ನೌಕರರಿಬ್ಬರನ್ನು ಕಳುಹಿಸಿದ್ದರಿಂದ, ಅವರನ್ನು ಸಭೆಯಿಂದ ಹೊರ ಕಳುಹಿಸಲು ಮುಂದಾದ ಘಟನೆ ಕೂಡ ನಡೆಯಿತು. ತಾಪಂ ಸಭೆಗೆ ಸಂಬಂಧಿಸಿದ ಮೆಸ್ಕಾಂ ಎಂಜಿನಿಯರ್‌ಗಳು ಸರಿಯಾಗಿ ಆಗಮಿಸುತ್ತಿಲ್ಲ ಎಂದು ಕೆಲ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಕೇವಲ ನೌಕರರು ಬರುವುದಾದರೆ ಸಭೆಗೆ ಮಹತ್ವವೇನು. ಮುಂದಿನ ಸಭೆಯಿಂದ ನೀವೇ ಬರುವುದಾದರೆ ನಿಮಗೆ ಪ್ರವೇಶವಿಲ್ಲ. ಅವಮಾನ ಮಾಡಬಾರದು ಎಂಬ ದೃಷ್ಟಿಯಿಂದ ಈ ಸಭೆಯಲ್ಲಿ ಕುಳಿತುಕೊಳ್ಳಲು ನಿಮಗೆ ಅವಕಾಶ ನೀಡಲಾಗುವುದು" ಎಂದು ಅಧ್ಯಕ್ಷೆ ತಿಳಿಸಿದರು.
ಉಪಾಧ್ಯಕ್ಷೆ ಹಾಗೂ ಪ್ರಭಾರಿ ಅಧ್ಯಕ್ಷೆ ನಿರ್ಮಲಾ ಮೋಹನ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು