×
Ad

"ಸಿ.ಟಿ. ರವಿ ಒತ್ತಾಯಕ್ಕೆ ಸರಕಾರ ಕಿವಿಗೊಡಬಾರದು"

Update: 2017-05-04 18:45 IST

ದಾವಣಗೆರೆ, ಮೇ 4: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ದತ್ತ ಜಯಂತಿಗೆ ಆಚರಣೆಗೆ ಅವಕಾಶ ನೀಡಲು ಶಾಸಕ ಸಿ.ಟಿ. ರವಿ ಒತ್ತಡ ಹೇರುತ್ತಿದ್ದು, ಅದಕ್ಕೆ ಸರಕಾರ ಅವಕಾಶ ನೀಡಬಾರದು ಎಂದು ಜೆಡಿಯು ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುದ್ದಾಪುರ ರೆಹಮಾನ್ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಶಾಸಕ ಸಿ.ಟಿ. ರವಿ ಬಾಬಾ ಬುಡನ್‌ಗಿರಿಯಲ್ಲಿ ದತ್ತ ಜಯಂತಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸರಕಾರ ಕಿವಿಗೊಡಬಾರದು. ಮೇ 9ಕ್ಕೆ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ದತ್ತ ಜಯಂತಿ ಆಚರಿಸಲು ಅನುವು ನೀಡುವಂತೆ ಒತ್ತಡ ಹೇರುತ್ತಿದ್ದು, ಅದಕ್ಕೆ ಸೊಪ್ಪು ಹಾಕಬಾರದು ಎಂದು ಅವರು ಆಗ್ರಹಿಸಿದರು.

ಬಾಬಾ ಬುಡನ್‌ಗಿರಿ ವಿಚಾರವಾಗಿ ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ 1974ರಲ್ಲೇ ಆದೇಶಿಸಿದ್ದು, ಈವರೆಗೆ ಯಾವುದೇ ಸರಕಾರಗಳೂ ಆ ಆದೇಶವನ್ನೇ ಪಾಲಿಸಿಲ್ಲ. ಬಾಬಾ ಬುಡನ್‌ಗಿರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು. ಯಥಾಸ್ಥಿತಿ ಕಾಪಾಡಬೇಕು. ಆದರೆ, ಬಸವತತ್ವಾನುಯಾಯಿ ಮಠಾಧೀಶರೊಬ್ಬರು ಇದನ್ನು ತಿಳಿಯದೇ, ದತ್ತ ಜಯಂತಿಗೆ ಒತ್ತಡ ಹೇರುತ್ತಿರುವುದೂ ಸರಿಯಲ್ಲ. ಸರಕಾರ ಯಾವುದೇ ಕಾರಣಕ್ಕೂ ಅಲ್ಲಿ ಜಯಂತಿಗೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.

ಬಾಬಾ ಬುಡನ್‌ಗಿರಿಯನ್ನು ದತ್ತ ಪೀಠವಾಗಿ ಪರಿವರ್ತಿಸಿ, ಹಿಂದು ಅರ್ಚಕರನ್ನು ನೇಮಿಸುವುದಾಗಿ ಸಿ.ಟಿ.ರವಿ ರಾಜ್ಯದ ವಿವಿಧ ಮಠಾಧೀಶರನ್ನು ಒಳಗೊಂಡಂತೆ ತನ್ನ ಕ್ಷೇತ್ರದ ಜನರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೇ 9ರಂದು ಸಚಿವ ಸಂಪುಟದ ಸಭೆಯಲ್ಲಿ ಸರಕಾರ ಯಾವುದೇ ಕಾರಣಕ್ಕೂ ಸಿ.ಟಿ. ರವಿ ಮನವಿ ಪುರಸ್ಕರಿಸಬಾರದು ಎಂದು ಒತ್ತಾಯಿಸಿದರು.

ದಾಖಲಾತಿ, ಕಾಗದ ಪತ್ರಗಳು ಬಾಬಾ ಬುಡನ್ ಗಿರಿ ದರ್ಗಾವೆಂದು ಹೇಳುತ್ತವೆ. ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗೂ ಈ ಬಗ್ಗೆ ಮನವಿ ಅರ್ಪಿಸಲಿದ್ದೇವೆ. ಗೃಹ ಸಚಿವರಿಗೂ ಪಕ್ಷದಿಂದ ಪತ್ರ ಬರೆದು, ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಅಸ್ಲಂ ಖಾದ್ರಿ ಶಿಷ್ಟಿ, ಸೈಯದ್ ಆಸೀಪುಲ್ಲಾ ಹುಸೇನ್ ಶಿಷ್ಟಿ, ಹೊದಿಗೆರೆ ಸಾದಿಕ್, ವೀರದ್ರಪ್ಪ, ದಸ್ತಗೀರ್ ಸಾಬ್, ಎ.ಸಿ. ಅಸ್ಲಂ, ಎಸ್.ಎ. ನಾಗರಾಜ, ಜಾಕೀರ್ ಹುಸೇನ್, ವೀರದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News