×
Ad

​ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ: ಪರಿಸರಪ್ರೇಮಿಗಳಿಂದ ವಿರೋಧ

Update: 2017-05-04 18:56 IST

ಗುಂಡ್ಲುಪೇಟೆ, ಮೇ 4: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಹುಲಿಯಮ್ಮನ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಈ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಜಾಗವು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದ್ದರೂ ಅರಣ್ಯಾಧಿಕಾರಿಗಳು ದೇವಸ್ಥಾನ ನಿರ್ಮಾಣ ಚಟುವಟಿಕೆ ತಡೆದಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಅಕ್ರಮ ವಿದ್ಯುತ್ ಸಂಪರ್ಕ: ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು 10 ವಿದ್ಯುತ್ ಕಂಬಗಳನ್ನು ನೆಟ್ಟು ತಂತಿಗಳನ್ನು ಎಳೆಯಲಾಗಿದೆ. ವಿದ್ಯುತ್ ಸಂಪರ್ಕ ನೀಡುವುದಕ್ಕೂ ಮೊದಲು ಇದರ ವಿರುದ್ಧ ಪರಿಸರ ಪ್ರಿಯರು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ 2016ರಲ್ಲಿ ದೂರು ಸಲ್ಲಿಸಿದರು. ಈ ಬಗ್ಗೆ ವರದಿ ನೀಡುವಂತೆ ಪ್ರಾಧಿಕಾರ ಆದೇಶ ಮಾಡಿತ್ತು.

ಅದರಂತೆ ಸ್ಥಳ ಪರಿಶೀಲನೆ ನಡೆಸಿದ ಹುಲಿ ಯೋಜನಾ ನಿರ್ದೇಶಕರು ವಿದ್ಯುತ್ ಕಾಮಗಾರಿಯು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ. ತಕ್ಷಣ ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕುಂದಕೆರೆ ಅರಣ್ಯ ವಲಯಾಧಿಕಾರಿಗೆ ಸೂಚಿಸಲಾಗಿದೆ. ನೋಟೀಸ್ ಪಡೆದ 2 ದಿನಗಳ ಒಳಗಾಗಿ ವಿದ್ಯುತ್ ಕಂಬವನ್ನು ತೆರವುಗೊಳಿಸುತ್ತೇವೆ ಎಂದು ಎ.ಸಿ.ಎಫ್. ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ 1 ವರ್ಷ ಕಳೆದರೂ ತೆರವುಗೊಳಿದಿರುವುದಕ್ಕೆ ಪರಿಸರಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಸಂರಕ್ಷಿತ ಪ್ರದೇಶದಿಂದ ಮತ್ತೊಂದು ಸಂರಕ್ಷಿತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾಗುವ ಕಾಮಗಾರಿಯನ್ನು ನಡೆಸುವಂತಿಲ್ಲ. ಸಾರ್ವಜನಿಕರ ಹಿತಾಸಕ್ತಿಗಾಗಿ ಈ ಪ್ರದೇಶವನ್ನು ಬಳಸಿಕೊಳ್ಳುವುದಾದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಿಂದ ಅನುಮತಿ ಪಡೆಯುವುದು ಅಗತ್ಯ.

ದೇವಸ್ಥಾನಕ್ಕೆ ಬರುವ ಜನಜಂಗುಳಿ ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ಮಾರಕವಾಗಿದೆ. ಇಲ್ಲಿ ವಾಹನ ಸಂಚಾರ, ಪ್ಲಾಸ್ಟಿಕ್ ಗಳಂತ ಮಾಲಿನ್ಯ ಗಳು ಹೆಚ್ಚಾಗುತ್ತಿದ್ದು ಇದರಿಂದಾಗಿ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ದೇವಸ್ಥಾನದ ನಿರ್ಮಾಣ  ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಹೆಚ್ಚಾಗಲು ಕಾರಣವಾಗಬಹುದು ಎಂದು ವನ್ಯಜೀವಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News