×
Ad

ಕದ್ದ ವಸ್ತುಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದವನ ಬಂಧನ

Update: 2017-05-04 23:20 IST

ಭಟ್ಕಳ, ಮೇ 4: ಪ್ಯಾಸೆಂಜರ್ ರೈಲಿನಲ್ಲಿ ಕಂಪ್ಯೂಟರ್ ಮಾನಿಟರ್, ಸಿ.ಪಿ.ಯು., ಲ್ಯಾಪ್ ಟಾಪ್, ಮೊಬೈಲ್, ಎಲ್‌ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಿಸುತ್ತಿದ್ದ ಕಳ್ಳನನ್ನು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೋಲೀಸರು ಬಂಧಿಸಿದ್ದಾರೆ.

ಭಟ್ಕಳ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣಕ್ಕೆ ಬಂದ ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲನ್ನು ಪರಿಶೀಲಿಸುವ ಸಂದರ್ಭ ಪ್ರಯಾಣಿಕನೋರ್ವನ ಮೇಲೆ ಸಂಶಯಗೊಂಡು ತಪಾಸಣೆ ಮಾಡಿದ್ದಾರೆ. ತಪಾಸಣೆಯ ಸಂದರ್ಭ ಆತ ಕಳ್ಳತನ ಮಾಡಿ ವಸ್ತುಗಳನ್ನು ಸಾಗಿಸುತ್ತಿರುವುದು ತಿಳಿದು ಬಂದಿದೆ.

ಪರಿಶೀಲನೆ ವೇಳೆ ಆತನ ಬಳಿ ಕಂಪ್ಯೂಟರ್ ಮಾನಿಟರ್, ಸಿ.ಪಿ.ಯು, ಲ್ಯಾಪ್ ಟಾಪ್, ಮೊಬೈಲ್, ಎಲ್‌ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು ಇದ್ದದ್ದು ಪತ್ತೆಯಾಗಿದೆ. ವಿಚಾರಿಸಿದಾಗ ಉಡುಪಿಯ ಮನೆಯೊಂದರಿಂದ ಕದ್ದಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಉಡುಪಿ ಪೋಲೀಸರಿಗೆ ಮಾಹಿತಿ ನೀಡಿದ ಭಟ್ಕಳ ರೈಲ್ವೆ ಪೊಲೀಸರು ಕಳ್ಳನನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.

ಕಳ್ಳತನ ಮಾಡಿದ ವ್ಯಕ್ತಿ ಬಾಗಲಕೋಟೆ ಮೂಲದವನಾಗಿದ್ದು, ನಿಂಗಪ್ಪ ಯಮೂನಪ್ಪ ಛಲವಾದಿ (23) ಎಂದು ತಿಳಿದುಬಂದಿದೆ. ಈತ ಮೇ 3ರಂದು ಉಡುಪಿಯ ಕಳಸಂಕದಲ್ಲಿನ ಲೇಬರ್ ಕಾಂಟ್ರಾಕ್ಟರ್ ಆಗಿದ್ದ ಸುರೇಶ ರಾವ್ ಎಂಬವರ ಮನೆಯಲ್ಲಿ ಕದ್ದಿರುವುದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸದ್ಯ ಆರೋಪಿ ಉಡುಪಿ ಪೋಲೀಸರ ವಶದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News