ಶಿರಚ್ಛೇದಗೊಂಡ ಹುತಾತ್ಮ ಯೋಧನ ಪುತ್ರಿಗೆ ಐಎಎಸ್ , ಐಪಿಎಸ್ ದಂಪತಿಯ ಆಸರೆ

Update: 2017-05-05 15:51 GMT

ಶಿಮ್ಲಾ,ಮೇ 5: ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೇ 1ರಂದು ಪಾಕ್ ಯೋಧರಿಂದ ಶಿರಚ್ಛೇದನಗೊಳಿಸಲ್ಪಟ್ಟ ಭಾರತೀಯ ಗಡಿಭದ್ರತಾಪಡೆಯ ಯೋಧನ 12 ವರ್ಷದ ಪುತ್ರಿಯನ್ನು ದತ್ತುತೆಗೆದುಕೊಳ್ಳಲು ಹಿಮಾಚಲಪ್ರದೇಶದ ದಂಪತಿಯು ನಿರ್ಧರಿಸಿದೆ. ಬಾಲಕಿಯ ಶಾಲಾಶಿಕ್ಷಣದಿಂದ ಹಿಡಿದು, ಆಕೆ ಪ್ರಾಯಪ್ರಬುದ್ಧಳಾಗಿ ವಿವಾಹವಾಗುವವರೆಗೂ ಆಕೆಯ ಖರ್ಚುವೆಚ್ಚಗಳನ್ನು ಭರಿಸುವ ಕೊಡುಗೆಯನ್ನು ಅವರು ನೀಡಿದ್ದಾರೆ.

ಬಿಎಸ್‌ಎಫ್‌ನ ನಯಿಬ್ ಸುಬೇದಾರ್ ಪರಮ್‌ಜಿತ್‌ಸಿಂಗ್‌ನ ಬಲಿದಾನಕ್ಕೆ ಗೌರವಾರ್ಪಣೆಯಾಗಿ, ಅವರ ಪುತ್ರಿ ಕುಶ್‌ದೀಪ್ ಕೌರ್‌ಳನ್ನು ಸಲಹಲು ಕುಲು ಜಲ್ಲಾಧಿಕಾರಿ ಯೂನುಸ್ ಖಾನ್ ಹಾಗೂ ಅವರ ಪತ್ನಿ ಐಪಿಎಸ್ ಅಧಿಕಾರಿ, ಅಂಜುಮ್ ಅರಾ ನಿರ್ಧರಿಸಿದ್ದಾರೆ.

ಆದಾಗ್ಯೂ ಕುಶ್‌ದೀಪ್ ಕೌರ್, ಮುಂದೆಯೂ ಆಕೆಯ ಕುಟುಂಬದ ಜೊತೆಗೆ ವಾಸಿಸಲಿದ್ದಾಳೆ. ಕಾಲಕಾಲಕ್ಕೆ ಆಕೆಯ ಶಿಕ್ಷಣ ಮತ್ತಿತರ ವೆಚ್ಚಗಳನ್ನು ಈ ದಂಪತಿ ಭರಿಸಲಿದ್ದಾರೆ. ಕಾಲಕಾಲಕ್ಕೆ ಆಕೆಯನ್ನು ಭೇಟಿಯಾಗಿ ಆಕೆಯ ಸಮಸ್ಯೆಗಳನ್ನು ತಿಳಿದುಕೊಂಡು ಆದನ್ನು ಬಗೆಹರಿಸಲು ಈ ದಂಪತಿ ತೀರ್ಮಾನಿಸಿದ್ದಾರೆ. ‘‘ ಒಂದು ವೇಳೆ ಕುಶ್‌ದೀಪ್ ಕೌರ್ ಐಎಎಸ್ ಅಥವಾ ಐಪಿಎಸ್ ಅಥವಾ ಬೇರೊಂದು ವೃತ್ತಿ ಬದುಕನ್ನು ಆಯ್ದುಕೊಂಡರೂ, ಆಕೆಗೆ ನೆರವಾಗಲು ನಾವಿದ್ದೇವೆ’’ ಸೋಲನ್ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕಿಯಾದ ಅಂಜುಮ್ ಅರಾ ತಿಳಿಸಿದ್ದಾರೆ.

ಹುತಾತ್ಮ ಯೋಧನ ಕುಟುಂಬಕ್ಕಾದ ನೋವನ್ನು ನೀಗಿಸುವುದು ಅತ್ಯಂತ ಕಷ್ಟಕರ. ಆದರೆ ಅವರ ದುಃಖವನ್ನು ಹಂಚಿಕೊಳ್ಳಲು ಪ್ರಯತ್ನಿಸುವುದಾಗಿ ಯೂನುಸ್ ತಿಳಿಸಿದರು.ಅವರ ಪುತ್ರಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ಮೂಲಕ ಜವಾಬ್ದಾರಿಯುತ ಪ್ರಜೆಗಳಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದಾಗಿ ಅಂಜುಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News