​ಹ್ಯಾರೀಸ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ

Update: 2017-05-06 11:50 GMT

ಮಡಿಕೇರಿ, ಮೇ 6: ನಾಪೋಕ್ಲುವಿನ ವೈದ್ಯಾಧಿಕಾರಿ ಡಾ ದೇವದಾಸ್ ಅವರು ದಲಿತ ಎನ್ನುವ ಕಾರಣಕ್ಕಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಹ್ಯಾರೀಸ್ ಎಂಬವರು ವಿನಾಕಾರಣ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳ ಒಕ್ಕೂಟ, ಹ್ಯಾರೀಸ್ ಬಂಧನಕ್ಕೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಎಸ್.ಸಿ. ಸತೀಶ್, ವೈದ್ಯರ ವಿರುದ್ಧ ಹ್ಯಾರೀಸ್ ಮಾಡಿರುವ ಆರೋಪಗಳನ್ನು ಖಂಡಿಸಿದರು. ತಾನೊಬ್ಬ ಮಾಹಿತಿ ಹಕ್ಕು ಕಾರ್ಯಕರ್ತ ಎಂದು ಹೇಳಿಕೊಂಡು ಇತರ ವ್ಯಕ್ತಿಗಳನ್ನು ತೇಜೋವಧೆ ಮಾಡುತ್ತಿರುವ ಹ್ಯಾರೀಸ್ ಅವರು, ಡಾ ದೇವದಾಸ್ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದರು.

ಹ್ಯಾರೀಸ್ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ರೌಡಿ ಶೀಟರ್ ಎನ್ನುವ ಹಣೆ ಪಟ್ಟಿಯೂ ಇದೆ. ಈತನನ್ನು ತಕ್ಷಣ ಬಂಧಿಸಿ ಗಡೀಪಾರು ಮಾಡದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಸಂಘಟನೆಯ ಸೋಮವಾರಪೇಟೆ ತಾಲ್ಲೂಕು ಮುಖ್ಯಸ್ಥ ಟಿ.ಸುರೇಶ್ ಮಾತನಾಡಿ, ಮುಜೀಬ್ ಎಂಬವರು ಶ್ರೀಜಾ ಎಂಬ ಮಹಿಳೆಯಿಂದ ಪಡೆದಿದ್ದ ಸಾಲವನ್ನು ಪೊಲೀಸ್ ಠಾಣೆಯಲ್ಲಿ ಮರಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ದೇವದಾಸ್ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ. ಹ್ಯಾರೀಸ್ ತಾನೊಬ್ಬ ಮಾಹಿತಿ ಹಕ್ಕು ಕಾರ್ಯಕರ್ತನೆಂದು ಹೇಳಿಕೊಂಡು ವೈದ್ಯರು ಹಾಗೂ ಶ್ರೀಜಾ ಎಂಬ ಮಹಿಳೆಗೆ ಅಗೌರವ ತೋರಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಡಗಿನಿಂದ ಗಡೀಪಾರು ಮಾಡಬೇಕು ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಡಾ.ದೇವದಾಸ್ ಅವರನ್ನು ನಿಂದಿಸಿರುವ ಪ್ರಕರಣವನ್ನು ಖಂಡಿಸುವುದಾಗಿ ತಿಳಿಸಿದರು. ಹ್ಯಾರೀಸ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ 10 ದಿನಗಳ ಒಳಗಾಗಿ ಬಂಧಿಸದಿದ್ದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಒಕ್ಕೂಟದ ಪ್ರಮುಖರಾದ ರಾಮಕೃಷ್ಣ, ಎಸ್.ಎ. ಪ್ರತಾಪ್ ಹಾಗೂ ಗುರುಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News