ಟೇಕ್ ಆಫ್ ಆಗದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ

Update: 2017-05-06 12:25 GMT

ಶಿವಮೊಗ್ಗ, ಮೇ. 6: ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿ ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದೆ. ಸದ್ಯಕ್ಕೆ ಕಾಮಗಾರಿ ಟೇಕಾಫ್ ಆಗುವ ಯಾವುದೇ ಲಕ್ಷಣಗಳೂ ಗೋಚರವಾಗುತ್ತಿಲ್ಲವಾಗಿದ್ದು, ಪ್ರಸ್ತುತ ಕಾಮಗಾರಿಗೆ ವೆಚ್ಚ ಮಾಡಲಾಗಿರುವ ನೂರಾರು ಕೋಟಿ ರೂ. ವ್ಯರ್ಥವಾಗುವಂತಾಗಿದೆ.

ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಿರಾಸಕ್ತಿ, ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣದಿಂದ ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ವಿಮಾನ ನಿಲ್ದಾಣ ಕಾಮಗಾರಿ ಪುನಾರಾರಂಭಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಪ್ರಸ್ತುತ  ನಡೆಸಲಾಗಿರುವ ವಿವಿಧ ಕಾಮಗಾರಿಗಳು ದುಸ್ಥಿತಿಗೆ ತಲುಪುತ್ತಿದ್ದು, ನಿರ್ಮಾಣ ಸ್ಥಳದಲ್ಲಿ ಹೇಳುವವರು-ಕೇಳುವವರು ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಸಂಕಷ್ಟ: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿತ್ತು. ಮೊದಲು ಮೈಥಾಸ್ ನಿರ್ಮಾಣ ಸಂಸ್ಥೆಯು ಕಾಮಗಾರಿ ನಿರ್ವಹಣೆ ಮಾಡುತ್ತಿತ್ತು. ಆದರೆ ಈ ಸಂಸ್ಥೆಯು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಕಾರಣದಿಂದ ಈ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಸರಕಾರ ರದ್ದುಗೊಳಿಸಿತ್ತು.

ತದನಂತರ ಮತ್ತೊಂದು ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಸಂಸ್ಥೆಯು ಕೂಡ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿತ್ತು. ಮತ್ತೊಂದೆಡೆ ಹಲವು ಸಮಸ್ಯೆಗಳನ್ನು ಮುಂದಿಟ್ಟು, ಪರಿಹರಿಸಿ ಕೊಡುವಂತೆ ಸರಕಾರವನ್ನು ಆಗ್ರಹಿಸಿತ್ತು. ಸಮಸ್ಯೆ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಂಡರೂ ಸಂಸ್ಥೆ ನಿರ್ಮಾಣ ಕೆಲಸ ಪುನರಾರಂಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೂಡ ಸರಕಾರ ರದ್ದುಗೊಳಿಸಿತ್ತು.

ಈ ನಡುವೆ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡ ರನ್ ವೇ ದಿಕ್ಕು ಬದಲಾವಣೆ, ನಿಲ್ದಾಣ ಸಮೀಪದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಲ ಕಟ್ಟಡಗಳ ಚಿಮಣಿ ಗೋಪುರ ತೆರವುಗೊಳಿಸುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ನಿರ್ಮಾಣ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದ ರದ್ಧತಿ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಇಲ್ಲಿಯವರೆಗೂ ಆರಂಭವಾಗಿಲ್ಲ.

ಪ್ರಸ್ತಾಪ ನನೆಗುದಿಗೆ: ಕರ್ನಾಟಕದವರೇ ಆದ ಜಿ.ಎಂ.ಸಿದ್ದೇಶ್ವರವರು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ವೇಳೆ, ರಾಜ್ಯ ಸರಕಾರವು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೇಂದ್ರ ಸರಕಾರದ ಸುಪರ್ದಿಗೆ ವಹಿಸಿದರೆ, ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ ಬಾಕಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರು.

ಇದಕ್ಕೆ ಸಂಬಂಧಿಸಿದಂತೆ ಅವರು ಸೋಗಾನೆ ಗ್ರಾಮಕ್ಕೆ ಖುದ್ದು ಭೇಟಿಯಿತ್ತು ಕಾಮಗಾರಿಯ ಪರಿಶೀಲನೆ ನಡೆಸಿದ್ದರು. ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದರು. ಹಾಗೆಯೇ ಬೆಂಗಳೂರಿನಲ್ಲಿ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ಕೂಡ ನಡೆಸಿದ್ದರು. ರಾಜ್ಯ ಸರಕಾರ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೇಂದ್ರದ ಸುಪರ್ದಿಗೆ ಒಪ್ಪಿಸಲು ಚಿಂತನೆ ನಡೆಸಿತ್ತು.

ಸರಕಾರದ ಉನ್ನತ ಮೂಲಗಳು ನೀಡುವ ಮಾಹಿತಿಯ ಪ್ರಕಾರ, ಈ ಪ್ರಸ್ತಾಪ ಕೂಡ ನನೆಗುದಿಗೆ ಬಿದ್ದಿದೆ. ಈ ಹಿಂದೆ ರಾಜ್ಯ ಸರಕಾರ ತೋರಿದ್ದ ಉತ್ಸಾಹ ಈಗಿಲ್ಲವಾಗಿದೆ. ಮತ್ತೊಂದೆಡೆ ಜಿ.ಎಂ.ಸಿದ್ದೇಶ್ವರವರು ನಾಗರಿಕ ವಿಮಾನಯಾನ ಸಚಿವ ಸ್ಥಾನದಿಂದ ನಿಗರ್ಮಿಸಿದ ನಂತರ ಕೇಂದ್ರ ಸರಕಾರಕ್ಕೂ ಈ ಬಗ್ಗೆ ಕಾಳಜಿಯಿಲ್ಲವಾಗಿದೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯೂ ಸದ್ಯಕ್ಕೆ ಪ್ರಾರಂಭವಾಗುವ ಯಾವುದೇ ಲಕ್ಷಣಗಳಿಲ್ಲ.

ವಿಮಾನ ನಿಲ್ದಾಣ ಕಾಮಗಾರಿಗೆ ಈಗಾಗಲೇ ನೂರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ನೂರಾರು ಕೋಟಿ ರೂ.ಗಳ ಅವಶ್ಯಕತೆಯಿದೆ. ಇಷ್ಟೊಂದು ದೊಡ್ಡ ಮೊತ್ತ ಭರಿಸಲು ರಾಜ್ಯ ಸರಕಾರ ಮುಂದಾಗುವ ಸಾಧ್ಯತೆ ಕಡಿಮೆಯಿದೆ. ಖಾಸಗಿ ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೂಡ ಸರಕಾರ ರದ್ದುಗೊಳಿಸಿದ್ದು, ಮತ್ತೊಮ್ಮೆ ಖಾಸಗಿ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಇದೆಲ್ಲವನ್ನು ಗಮನಿಸಿದರೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸದ್ಯಕ್ಕೆ ಪ್ರಾರಂಭವಾಗುವುದು ಅಕ್ಷರಶಃ ಕನಸಿನ ಮಾತಾಗಿದೆ. ಪ್ರಸ್ತುತ ನೂರಾರು ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿರುವ ಕಾಮಗಾರಿಯೂ ಧೂಳು ಹಿಡಿಯುವಂತಾಗಿದ್ದು, ಹಾಳಾಗುತ್ತಿದೆ. ಇದೀಗ ಈ ಯೋಜನೆ ಯಾರಿಗೂ ಬೇಡವಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ಹೇಳುತ್ತಾರೆ.

2007ರಲ್ಲಿ ಅನುಮತಿ ನೀಡಲಾಗಿತ್ತು
ಸರಿಸುಮಾರು 662 ಎಕರೆ ಪ್ರದೇಶದಲ್ಲಿ 2007ರಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ರಾಜ್ಯ ಸರಕಾರ ಅನುಮತಿ ನೀಡಿತ್ತು. ಭೂ ಸ್ವಾದೀನ ಪ್ರಕ್ರಿಯೆ ನಡೆಸಿ 2010ರಲ್ಲಿ ನಿರ್ಮಾಣ ಸಂಸ್ಥೆಯೊಂದಿಗೆ ಅಧಿಕೃತ ಒಪ್ಪಂದ ಕೂಡ ಸರಕಾರ ಮಾಡಿಕೊಂಡಿತ್ತು. ಪ್ರಾರಂಭಿಕ ಹಂತದಲ್ಲಿ 192 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿತ್ತು. 3.1 ಕಿ.ಮೀ. ಉದ್ದದ ರನ್ ವೇ, ಟರ್ಮಿನಲ್ ಕಟ್ಟಡ, ಕಾಂಪೌಂಡ್ ಸೇರಿದಂತೆ ಇತರೆ ಕಾಮಗಾರಿಗಳನ್ನು ನಿರ್ಮಾಣ ಸಂಸ್ಥೆ ಕೈಗೆತ್ತಿಕೊಳ್ಳಬೇಕಾಗಿತ್ತು. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News