ದಿಡ್ಡಳ್ಳಿಯಿಂದ ನಿರಾಶ್ರಿತರ ತೆರವು: 5 ತಿಂಗಳ ಹೋರಾಟಕ್ಕೆ ತೆರೆ

Update: 2017-05-06 13:37 GMT

ಮಡಿಕೇರಿ ಮೇ 6:  5 ತಿಂಗಳಿನಿಂದ ಭೂಮಿಯ ಹಕ್ಕಿಗಾಗಿ ದಿಡ್ಡಳ್ಳಿಯಲ್ಲಿ ನಡೆಯುತ್ತಿದ್ದ ಆದಿವಾಸಿಗಳ ಹೋರಾಟಕ್ಕೆ ಜಿಲ್ಲಾಡಳಿತ ತೆರೆ ಎಳೆದಿದೆ.

ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಆಶ್ರಮ ಶಾಲೆಯ ಬಳಿ ಆದಿವಾಸಿ ಕುಟುಂಬಗಳು ಗುಡಿಸಲು ನಿರ್ಮಾಣ ಮಾಡಿಕೊಂಡಿವೆ ಎಂದು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಿತು. ಶನಿವಾರದಂದು ಲಾರಿಗಳ ಮೂಲಕ  ಆದಿವಾಸಿಗಳನ್ನು ಪುನರ್ ವಸತಿ ಪ್ರದೇಶಕ್ಕೆ ಕಳುಹಿಸಿಕೊಡಲಾಯಿತು.

ಕೆಲವು ದಿನಗಳ ಹಿಂದೆ ನಿರಾಶ್ರಿತ ಆದಿವಾಸಿಗಳು ಏಕಾಏಕಿ ಮೀಸಲು ಅರಣ್ಯದಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿ ಹೋರಾಟವನ್ನು ತೀವ್ರಗೊಳಿಸುವ ಮನ್ಸೂಚನೆ ನೀಡಿದ್ದರು. ಆದಿವಾಸಿ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಅವರು ಮರವೇರಿ ಪ್ರತಿಭಟನೆ ನಡೆಸಿ ಆದಿವಾಸಿಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿ ವರ್ಗ ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ನಿರ್ಮಾಣ ಮಾಡಿದ್ದ ಗುಡಿಸಲುಗಳನ್ನಲ್ಲದೆ ಆಶ್ರಮ ಶಾಲೆ ಹಾಗೂ ರಸ್ತೆ ಬದಿಯಲ್ಲಿದ್ದ ಗುಡಿಸಲುಗಳನ್ನು ಶನಿವಾರ ಬೆಳಗ್ಗೆ ತೆರವುಗೊಳಿಸುವಲ್ಲಿ ಯಶ್ವಸಿಯಾಯಿತು.

ಶಾಸಕ ಕೆ.ಜಿ.ಬೋಪಯ್ಯ ಭೇಟಿ: ಸ್ಥಳಕ್ಕೆ ಬೇಟಿ ನೀಡಿ ಮಾತಾನಾಡಿದ ಶಾಸಕ ಕೆ.ಜಿ.ಬೋಪಯ್ಯ ತಾನು ಈ ಹಿಂದೆಯೆ ದಿಡ್ಡಳ್ಳಿ ಜಾಗವು ಮೀಸಲು ಅರಣ್ಯಕ್ಕೆ ಸೇರಿದ್ದಾಗಿದೆ, ಈ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಆದರೆ 5 ತಿಂಗಳ ಹಿಂದೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಕೆಲವು ರಾಜ್ಯ ಹಾಗೂ ಜಿಲ್ಲೆಯ ಮುಖಂಡರು ಆದಿವಾಸಿಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲಕ್ಕೆ ಸಿಲುಕಿಸಿದರು ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲೆಯ ಮೂರು ಭಾಗಗಳಲ್ಲಿ ಜಿಲ್ಲಾಡಳಿತ ಗುರುತಿಸಿರುವ ಸ್ಥಳಕ್ಕೆ ತೆರಳುವಂತೆ ಆದಿವಾಸಿಗಳ ಮನವೊಲಿಸಿದ ಅವರು ಶಾಶ್ವತ ಸೂರು ಆಗುವವರೆಗೆ ಆಹಾರ ಪದಾರ್ಥಗಳನ್ನು ನೀಡಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದಿಡ್ಡಳ್ಳಿಯನ್ನು ತೊರೆದ ಆದಿವಾಸಿಗಳು: 5 ತಿಂಗಳಿನಿಂದ ದಿಡ್ಡಳ್ಳಿಯಲ್ಲಿದ್ದ ನಿರಾಶ್ರಿತ ಕುಟುಂಬಗಳು ಜಿಲ್ಲಾಡಳಿತ ಗುರುತಿಸಿದ ಬಸವನಳ್ಳಿ ಹಾಗೂ ಬ್ಯಾಡಗೊಟ್ಟ ಸ್ಥಳಗಳಿಗೆ ಸಾಮಗ್ರಿಗಳೊಂದಿಗೆ ಲಾರಿಯಲ್ಲಿ ತೆರಳಿದರು. ಬೆಳಗ್ಗೆ 7:30ಕ್ಕೆ ಕಾರ್ಯಾಚರಣೆ ನಡೆಸಿದ ಪೋಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಕೆಲವು ಅದಿವಾಸಿಗಳು ಪ್ರತಿರೋಧ ವ್ಯಕ್ತಪಡಿಸಿದರು. ಮೂವರು ಡಿವೈಎಸ್‌ಪಿ ಸೇರಿದಂತೆ 800 ಪೊಲೀಸ್ ಸಿಬ್ಬಂದಿ, 150 ಅರಣ್ಯ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗುಡಿಸಲುಗಳನ್ನು ತೆರವುಗೊಳಿಸಿದರು.

ಅರೆಬೆತ್ತಲೆ ಪ್ರತಿಭಟನೆ ವ್ಯರ್ಥ: ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭ ಮತ್ತೊಮ್ಮೆ ಮರವೇರಿ ವಿರೋಧ ವ್ಯಕ್ತಪಡಿಸಿದ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆಯಿಂದ ಹಿಂದೆ ಸರಿಯದ ಕಾರಣ ಹೋರಾಟ ವ್ಯರ್ಥವಾಯಿತು. ಈ ಹಿಂದೆ ಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ದಿಡ್ಡಳ್ಳಿ ಹೋರಾಟಕ್ಕೆ  ಮುತ್ತಮ್ಮ ಬಲ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News